ಮುಂಬೈ, ಜ.21 (DaijiworldNews/PY): ಮುಂಬೈ ಮಹಾನಗರದ ಜುಹು ಪ್ರದೇಶದಲ್ಲಿನ ತನ್ನ ವಸತಿ ಕಟ್ಟಡವನ್ನು ಅನುಮತಿ ಇಲ್ಲದೆಯೇ ಹೊಟೇಲ್ ಆಗಿ ಪರಿವರ್ತಿಸಿದ್ದಾರೆ ಎನ್ನುವ ಹಿನ್ನೆಲೆ ಬೃಹತ್ ಮುಂಬೈ ಮಹಾನಗರ ಪಾಲಿಕೆ ನೀಡಿದ್ದ ನೋಟಿಸ್ ವಿರುದ್ದ ನಟ ಸೋನ್ ಸೂದ್ ಸಲ್ಲಿಸಿರುವ ಮೇಲ್ಮನವಿ ಹಾಗೂ ಮಧ್ಯಂತರ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.
ನ್ಯಾ. ಪೃಥ್ವಿರಾಜ್ ಚವ್ಹಾಣ್ ಅವರು ಸೋನು ಸೂದ್ ಅವರ ಮೇನ್ಮವಿಹಾಗೂ ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿದ್ದು, "ಶ್ರದ್ದೆಯುಳ್ಳವರಿಗೆ ಕಾನೂನು ನೆರವಾಗುತ್ತದೆ" ಎಂದಿದ್ದಾರೆ.
ಸೋನು ಸೂದ್ ಪರ ವಕೀಲ ಅಮೋಘ್ ಸಿಂಗ್ ಹೈಕೋರ್ಟ್ಗೆ ಮನವಿ ಮಾಡಿದ್ದು, ಬಿಎಂಸಿ ಜಾರಿ ಮಾಡಿರುವ ನೋಟಿಸ್ಗೆ ಪ್ರತಿಕ್ರಿಯೆ ನೀಡಲು ಹತ್ತು ವಾರಗಳ ಕಾಲಾವಕಾಶ ನೀಡಬೇಕು. ಅಕ್ರಮ ಕಟ್ಟಡದ ಧ್ವಂಸ ಕಾರ್ಯ ಪ್ರಾರಂಭ ಮಾಡದಂತೆ ಬಿಎಂಸಿಗೆ ನಿರ್ದೇಶನ ನೀಡುವಂತೆ ಕೇಳಿದ್ದರು.
ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯವು, "ಈ ಹಿಂದೆ ಸೋನು ಸೂದ್ ಅವರಿಗೆ ಸಾಕಷ್ಟು ಅವಕಾಶಗಳಿದ್ದವು. ಅವಶ್ಯವಾದಲ್ಲಿ ಅವರು ಬಿಎಂಸಿಯನ್ನು ಸಂಪರ್ಕಿಸಬಹುದು. ಸೋನು ಸೂದ್ ತಡವಾಗಿ ಬಂದಿದ್ದೀರಿ" ಎಂದು ಹೇಳಿದೆ.
ಸೋನು ಸೂದ್ ತಮ್ಮ ಆರು ಅಂತಸ್ತಿನ 'ಶಕ್ತಿ ಸಾಗರ್' ನಿವಾಸದ ಕಟ್ಟಡವನ್ನು ಅನುಮತಿ ಇಲ್ಲದೇ ಹೊಟೇಲ್ ಆಗಿ ಪರಿವರ್ತಿಸಿದ್ದರು ಎಂದು ಬಿಎಂಸಿ ಆರೋಪಿಸಿತ್ತು.