ಬೆಂಗಳೂರು,ಜ.21 (DaijiworldNews/HR): "ಕೊರೊನಾದಿಂದಾಗಿ ಸ್ಥಗಿತಗೊಳಿಸಲಾಗಿದ್ದ 'ಹಳ್ಳಿಗೆ ನಡೆಯಿರಿ ಜಿಲ್ಲಾಧಿಕಾರಿಗಳೇ' ಕಾರ್ಯಕ್ರಮವನ್ನು ಮತ್ತೆ ಆರಂಭಿಸಲಾಗುತ್ತಿದ್ದು, ಪ್ರತಿ ತಿಂಗಳ ಮೂರನೇ ಶನಿವಾರ ಎಲ್ಲ ಜಿಲ್ಲಾಧಿಕಾರಿಗಳಿಗೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಗ್ರಾಮ ವಾಸ್ತವ್ಯ ಕಡ್ಡಾಯಗೊಳಿಸಲಾಗಿದೆ" ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇದು ನನ್ನ ಕನಸಿನ ಯೋಜನೆಯಾಗಿದ್ದು, ಹಳ್ಳಿ ಜನರ ಸಮಸ್ಯೆ ಆಲಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ" ಎಂದರು.
ಇನ್ನು ಫೆ. 3ರಿಂದ 5ರವರೆಗೆ ಮೂರು ದಿನ ಏರೋ ಇಂಡಿಯಾ - 2021 ನಡೆಯಲಿದ್ದು, 14 ರಾಷ್ಟ್ರಗಳ 551 ಪ್ರದರ್ಶನದ ಕೇಂದ್ರ, 61 ವಿಮಾನಗಳ ಪ್ರದರ್ಶನ ನಡೆಯಲಿದೆ" ಎಂದು ತಿಳಿಸಿದ್ದಾರೆ.
ಖಾತೆ ಬದಲಾವಣೆಯಿಂದ ಕೆಲವು ಸಚಿವರು ಅಸಮಾಧಾನಗೊಂಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, "ಎಲ್ಲರನ್ನೂ ತೃಪ್ತಿಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರು ಎಲ್ಲರಿಗೂ ಒಳ್ಳೆಯ ಖಾತೆಗಳನ್ನು ಕೊಟ್ಟಿದ್ದಾರೆ" ಎಂದು ಹೇಳಿದ್ದಾರೆ.