ನವದೆಹಲಿ, ಜ.21 (DaijiworldNews/MB) : ಭಾರತದಿಂದ ಬಾಂಗ್ಲಾದೇಶ, ನೇಪಾಳಕ್ಕೆ ಕೋವಿಶೀಲ್ಡ್ ಕೊರೊನಾ ಲಸಿಕೆಯನ್ನು ಗುರುವಾರ ರವಾನೆ ಮಾಡಲಾಗಿದೆ.
ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು, ''ಮೇಡ್ ಇನ್ ಇಂಡಿಯಾದ ಕೊರೊನಾ ಸೋಂಕು ಲಸಿಕೆ ನೇಪಾಳಕ್ಕೆ ಹೊರಟಿದೆ'' ಎಂದು ಟ್ವೀಟ್ ಮಾಡಿದ್ದಾರೆ. ಹಾಗೆಯೇ ಬಳಿಕ ಮತ್ತೊಂದು ಟ್ವೀಟ್ನಲ್ಲಿ, ''ಮುಂದಿನ ನಿಲ್ದಾಣ ಬಾಂಗ್ಲಾದೇಶ. ಭಾರತೀಯ ನಿರ್ಮಿತ ಕೋವಿಡ್ ಲಸಿಕೆಗಳನ್ನು ಬಾಂಗ್ಲಾದೇಶ ರವಾನಿಸಲಾಗುತ್ತಿದೆ'' ಎಂದು ಹೇಳಿದ್ದಾರೆ.
ಭಾರತದ ಸೀರಂ ಸಂಸ್ಥೆಯ ಒಟ್ಟು 20 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಾಂಗ್ಲಾದೇಶದ ಢಾಕಾಗೆ ರವಾನೆ ಮಾಡಲಾಗಿದೆ ಎಂದು ವರದಿಯಾಗಿದೆ. ಒಂದು ಲಕ್ಷ ಡೋಸ್ ಲಸಿಕೆಯನ್ನು ನೇಪಾಳಕ್ಕೂ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.
ಬುಧವಾರ ಮಾಲ್ಡೀವ್ಸ್ ಹಾಗೂ ಭೂತಾನ್ಗೆ ಲಸಿಕೆ ರವಾನೆ ಮಾಡಲಾಗಿದೆ. ಇದಕ್ಕೂ ಮೊದಲು ಭಾರತವು ಹೈಡ್ರೋಕ್ಲೊರೊಕ್ವಿನ್, ರೆಮ್ಡೆಸಿವಿರ್ ಮತ್ತು ಪ್ಯಾರಾಸಿಟಮಲ್ ಮಾತ್ರೆಗಳು, ಡಯಾಗ್ನಾಸ್ಟಿಕ್ ಕಿಟ್, ವೆಂಟಿಲೇಟರ್ಸ್, ಮಾಸ್ಕ್, ಗ್ಲೌಸ್ ಮೊದಲಾದವುಗಳನ್ನು ಹಲವು ರಾಷ್ಟ್ರಗಳಿಗೆ ರಫ್ತು ಮಾಡಿದೆ.