ಮುಂಬೈ, ಜ.21 (DaijiworldNews/PY): "ಹಿರಿಯ ಬರಹಗಾರ ಹಾಗೂ ಗೀತೆ ರಚನೆಕಾರ ಜಾವೇದ್ ಅಖ್ತರ್ ಅವರು ಸಲ್ಲಿಸಿದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಕಂಗನಾ ಅವರನ್ನು ಶುಕ್ರವಾರ ಇಲ್ಲಿನ ಜುಹು ಪೊಲೀಸರ ಮುಂದೆ ಹಾಜರಾಗುವಂತೆ ನೋಟಿಸ್ನಲ್ಲಿ ಸೂಚಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ತನ್ನ ವಿರುದ್ಧ ಟಿವಿ ಸಂದರ್ಶನಗಳಲ್ಲಿ ಮಾನಹಾನಿಕರ ಹಾಗೂ ಆಧಾರರಹಿತ ಹೇಳಿಕೆಗಳನ್ನು ನೀಡಿದ್ದ ಕಾರಣ ಕಳೆದ ನವೆಂಬರ್ನಲ್ಲಿಅಖ್ತರ್ ಅವರು ಕಂಗನಾ ವಿರುದ್ಧ ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಕ್ರಿಮಿನಲ್ ದೂರು ದಾಖಲಿಸಿದ್ದರು.
"ಕಳೆದ ವರ್ಷ ಜೂನ್ನಲ್ಲಿ ಮೃತಪಟ್ಟ ಬಾಲಿವುಡ್ ನಟ ಸುಶಾಂತ್ ಸಿಂಗ್ ಪ್ರಕರಣ ಸಂಬಂಧಿಸಿದಂತೆ ನನ್ನ ವಿರುದ್ದ ಕಂಗನಾ ಸುಖಾಸುಮ್ಮನೆ ಆರೋಪಿಸಿದ್ದರು" ಎಂದು ದೂರಿನಲ್ಲಿ ತಿಳಿಸಿದ್ದಾರೆ.
"ನಟ ಹೃತಿಕ್ ರೋಷನ್ ಅವರೊಂದಿಗಿನ ಸಂಬಂಧದ ಬಗ್ಗೆ ಮೌನವಾಗಿರಲು ಅಖ್ತರ್ ಬೆದರಿಕೆ ಹಾಕಿದ್ದಾನೆ ಎಂದು ಕಂಗನಾ ಸುಳ್ಳು ಆರೋಪ ಮಾಡಿದ್ದಾರೆ" ಎಂದು ದೂರಿನಲ್ಲಿ ತಿಳಿಸಲಾಗಿದೆ.
"ಕಂಗನಾ ಅವರ ಟೀಕೆಗಳಿಂದ ನನ್ನ ಗೌರವಕ್ಕೆ ಧಕ್ಕೆಯಾಗಿದೆ" ಎಂದು ದೂರು ನೀಡಿದ್ದಾರೆ.