ಬೆಂಗಳೂರು,ಜ.21 (DaijiworldNews/HR): ರಾಜರಾಜೇಶ್ವರಿ ನಗರ ಕ್ಷೇತ್ರದ ವ್ಯಾಪ್ತಿಯಲ್ಲಿ 2018ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಜಾಲಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ಸಾವಿರಾರು ನಕಲಿ ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಹೈಕೋರ್ಟ್ ನಿರಾಕರಿಸಿದೆ, ಇದರಿಂದ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನಗೆ ರಿಲೀಫ್ ಸಿಕ್ಕಂತಾಗಿದೆ.
ಎನ್. ಆನಂದ್ ಮತ್ತಿತರರು ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಅವರ ನೇತೃತ್ವದ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿದ್ದು, ವಾದ-ಪ್ರತಿವಾದ ಆಲಿಸಿದ ಬಳಿಕ ಅರ್ಜಿದಾರರು ತಾವು ರಾಜಕೀಯ ಪಕ್ಷವೊಂದರ ಹಿತೈಷಿಗಳು ಎಂದು ಹೇಳಿಕೊಂಡಿದ್ದಾರೆ. ಪ್ರಕರಣದ ತನಿಖೆಯನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಅರ್ಜಿದಾರರ ಮನವಿಯನ್ನು ಪರಿಗಣಿಸುವ ಅಂಶಗಳು ಕಂಡು ಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟು, ಅರ್ಜಿಯನ್ನು ಇತ್ಯರ್ಥಪಡಿಸಿತು.
ಪ್ರಕರಣದ ತನಿಖೆಯನ್ನು ಜಾಲಹಳ್ಳಿ ಪೊಲೀಸರು ಸಮರ್ಪಕವಾಗಿ ನಡೆಸಿಲ್ಲ ಎಂದು ಅರ್ಜಿದಾರರು ಈ ಹಿಂದೆ ಆಕ್ಷೇಪಿಸಿದ್ದರು. ಅದನ್ನು ಪರಿಗಣಿಸಿದ್ದ ಹೈಕೋರ್ಟ್, ಜಾಲಹಳ್ಳಿ ಠಾಣಾ ಪೊಲೀಸರು ಸಮರ್ಪಕವಾಗಿ ತನಿಖೆ ನಡೆಸಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸಲು ಹಿರಿಯ ಐಪಿಎಸ್ ಅಧಿಕಾರಿಯನ್ನು ನೇಮಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸಿತ್ತು.
ಇನ್ನು ಪ್ರಕರಣ ಕುರಿತು ಜಾಲಹಳ್ಳಿ ಠಾಣೆ ಪೊಲೀಸರು ನಡೆಸಿರುವ ತನಿಖೆಯಲ್ಲಿ ಕೆಲ ಲೋಪಗಳಿದ್ದು, ಪ್ರಕರಣದಲ್ಲಿ ದಾಖಲಾಗಿರುವ ಎರಡೂ ಎಫ್ಐಆರ್ಗಳಿಗೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ. ಆದರೆ ಮುನಿರತ್ನ ವಿರುದ್ಧ ಆರೋಪ ಮಾಡುತ್ತಿರುವ ಅರ್ಜಿದಾರರು ತನಿಖೆಗೆ ಸೂಕ್ತ ಸಹಕಾರ ನೀಡುತ್ತಿಲ್ಲ. ಅರ್ಜಿದಾರರು ಹಾಗೂ ಮುನಿರತ್ನ ನಡುವೆ ಮನಸ್ಥಾಪವಿದೆ ಎಂಬ ಅಂಶಗಳನ್ನು ವರದಿಯಲ್ಲಿದೆ ಎಂದು ಉಲ್ಲೇಖೀಸಲಾಗಿದೆ.