ಬೆಂಗಳೂರು, ಜ.21 (DaijiworldNews/PY): ಬಿಜೆಪಿ ಪಾಳಯದಲ್ಲಿ ಭಿನ್ನಾಭಿಪ್ರಾಯದ ಮಾತುಗಳು ಕೇಳಿಬರುತ್ತಿದ್ದು, ನೂತನ ಸಚಿವರಿಗೆ ಖಾತೆ ಹಂಚಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಎಂ ಬಿಎಸ್ವೈ ಅವರ ಪುತ್ರ ಬಿ.ವೈ ವಿಜಯೇಂದ್ರ ಅವರು ಮಧ್ಯಪ್ರವೇಶಿಸಿದ್ದಾರಾ? ಎನ್ನುವ ಆರೋಪಗಳು ಕೇಳಿಬರುತ್ತಿವೆ. ಯಡಿಯೂರಪ್ಪ ಅವರು ಸಿಎಂ ಆಗಿ ಅಧಿಕಾರ ವಹಿಸಿಕೊಂಡ ದಿನದಿಂದ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರು ಸರ್ಕಾರದ ಎಲ್ಲಾ ವ್ಯವಹಾರಗಳಲ್ಲಿ ಮೂಗು ತೂರಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೆಲ ದಿನಗಳ ಹಿಂದೆ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭ ಕೆಲವು ಪ್ರಮುಖ ಸಮಿತಿಯ ಸದಸ್ಯರು, ಸರ್ಕಾರದ ಆಡಳಿತದಲ್ಲಿ ಸಿಎಂ ಅವರ ಕುಟುಂಬದ ಹಸ್ತಕ್ಷೇಪದ ವಿಚಾರವಾಗಿ ದೂರು ನೀಡಿದ್ದರು. ನಂತರ ಸಿಎಂ ಅವರನ್ನು ಸಂಪರ್ಕಿಸಿದ ಹಿರಿಯ ನಾಯಕರು ತಮ್ಮ ಪುತ್ರ ಹಾಗೂ ಕುಟುಂಬದ ಸದಸ್ಯರನ್ನು ಆಡಳಿತದ ವಿಚಾರದಲ್ಲಿ ದೂರವಿಡಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ವಿಜಯೇಂದ್ರ ಅವರು ಖಾತೆ ಹಂಚಿಕೆಯ ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗಿದೆ.
ಸಚಿವರ ಖಾತೆ ಹಂಚಿಕೆಯ ಪಟ್ಟಿಯನ್ನು ರಾಜ್ಯಪಾಲರಿಗೆ ರವಾನಿಸಲಾಗಿದೆ ಎನ್ನುವ ಮಾಹಿತಿ ತಿಳಿದ ಕೂಡಲೇ ಪ್ರಮುಖ ಖಾತೆಗಳನ್ನು ಕಳೆದುಕೊಂಡ ಅನೇಕ ಸಚಿವರು ಬಿ.ವೈ.ವಿಜಯೇಂದ್ರ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ, ಅವರು ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯಪಾಲರು ಪಟ್ಟಿಗೆ ಸಹಿ ಹಾಕುವ ಮುನ್ನ ಈ ಸಚಿವರು ಅದೇ ಇಲಾಖೆಗಳಲ್ಲಿ ಕಾರ್ಯ ಮುಂದುವರೆಸಲು ಬಯಸಿದ್ದಾರೆ ಎನ್ನಲಾಗಿದೆ.
ಮಾಹಿತಿಯ ಪ್ರಕಾರ, 17 ಮಂತ್ರಿಗಳ ಖಾತೆಯನ್ನು ಮರುಹಂಚಿಕೆ ಮಾಡಲಾಗಿದೆ. ಹೊಸದಾಗಿ ಸೇರ್ಪಡೆಗೊಂಡ ಏಳು ಮಂತ್ರಿಗಳಿಗೆ ಕೇವಲ ಖಾತೆಗಳನ್ನು ನೀಡುವ ಬದಲು ಕೆಲವು ಸಚಿವರು ಹೊಂದಿದ್ದ ಖಾತೆಗಳನ್ನು ಹಿಂಪಡೆದು ಇತರರಿಗೆ ಹಂಚಲಾಗಿದೆ ಎಂದು ಹೇಳಲಾಗಿದೆ.