ಬೆಂಗಳೂರು, ಜ.21 (DaijiworldNews/MB) : ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಜೆಡಿಎಸ್ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಭೇಟಿ ನೀಡಿದ್ದು ಅರ್ಧ ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದ್ದಾರೆ. ಈ ಭೇಟಿಯು ರಾಜಕೀಯ ವಲಯದಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಆದರೆ ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಹೆಚ್ಡಿಕೆ, ''ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚಿಸಿಲ್ಲ'' ಎಂದು ಹೇಳಿದರು.
''ಜೆಡಿಎಸ್ ಪಕ್ಷ ಸೇರ್ಪಡೆಗೆ ಮನವೊಲಿಸಲು ನಾನು ಈ ಭೇಟಿ ಮಾಡಿಲ್ಲ. ದೇವೇಗೌಡರು ಮತ್ತು ಎಸ್.ಆರ್. ಬೊಮ್ಮಾಯಿ ಸ್ನೇಹಿತರಾಗಿದ್ದರು. ನಮ್ಮದು ಹಳೆಯ ಸ್ನೇಹವಷ್ಟೇ. ಒಂದೇ ಕುಟುಂಬದಂತೆ ಇದ್ದೇವೆ. ನನ್ನ ಕ್ಷೇತ್ರದ ಕೆಲವು ಹುದ್ದೆಗಳ ಬಗ್ಗೆ ಚರ್ಚಿಸಿದ್ದೇನೆ. ಬೇರೇನೂ ಇಲ್ಲ'' ಎಂದರು.
''ಬೆಳಗಾವಿ ವಿಷಯದಲ್ಲೂ ಚರ್ಚಿಸಿದ್ದೇನೆ. ಎಂಇಎಸ್ ಹಾಗೂ ಶಿವಸೇನೆ ವಿರುದ್ದ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು'' ಎಂದು ಹೇಳಿದ್ದೇನೆ ಎಂದು ಹೇಳಿದರು.
ಹಾಗೆಯೇ ಈ ಸಂದರ್ಭದಲ್ಲಿ ಎಂಇಎಸ್, ಶಿವಸೇನೆ ವಿರುದ್ದ ಹರಿಹಾಯ್ದ ಅವರು, ''ಎಂಇಎಸ್, ಶಿವಸೇನೆ ಉದ್ದಟತನ ತೋರುತ್ತಿದೆ. ಬೆಳಗಾವಿಯ ಪಾಲಿಕೆ ಮೇಲೆ ಕನ್ನಡದ ಧ್ವಜ ಹಾಟಾಟಕ್ಕೆ ವಿರೋಧ ವ್ಯಕ್ತಪಡಿಸುವವರು ರಾಜ್ಯ ದ್ರೋಹಿಗಳು. ನಾವು ಕರ್ನಾಟಕದಲ್ಲಿ ಅಲ್ಲದೇ ಮಹಾರಾಷ್ಟ್ರದಲ್ಲಿ ಕರ್ನಾಟಕದ ಧ್ವಜ ಹಾರಿಸಲಾಗುವುದೇ'' ಎಂದು ಪ್ರಶ್ನಿಸಿದರು. ಹಾಗೆಯೇ, ''ಈ ರಾಜ್ಯ ದ್ರೋಹಿಗಳನ್ನು ಗಡಿಪಾರು ಮಾಡಬೇಕು'' ಎಂದು ಆಗ್ರಹಿಸಿದರು.
ಇನ್ನು ಬಸವರಾಜು ಬೊಮ್ಮಾಯಿ ಕೂಡಾ ಮಾತನಾಡಿದ್ದಾರೆ. ''ನಮ್ಮ ನಡುವೆ ಯಾವುದೇ ರಾಜಕೀಯ ವಿಚಾರ ಚರ್ಚೆಯಾಗಿಲ್ಲ. ಈ ಭೇಟಿ ಬಗ್ಗೆ ವದಂತಿಯನ್ನು ಹಬ್ಬಿಸುವುದು ಬೇಡ. ನನ್ನ ತಂದೆ ಕಾಲದಿಂದಲೇ ನಾವು ಸ್ನೇಹಿತರು. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಅವರು ಚರ್ಚಿಸಿದ್ದಾರೆ'' ಎಂದು ಹೇಳಿದರು.