ಬೆಂಗಳೂರು, ಜ.21 (DaijiworldNews/MB) : ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜೆ. ಜಯಲಲಿತಾ ಅವರ ಆಪ್ತೆ ವಿಕೆ ಶಶಿಕಲಾ ಅವರಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಅವರನ್ನು ಐಸಿಯುನಲ್ಲಿಟ್ಟು ಆಮ್ಲಜನಕ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬೌರಿಂಗ್ ಆಸ್ಪತ್ರೆಯ ಡೀನ್ ಮತ್ತು ನಿರ್ದೇಶಕ ಡಾ. ಮನೋಜ್ ಕುಮಾರ್ ಅವರು, ಶಶಿಕಲಾ ಅವರಿಗೆ ತೀವ್ರವಾದ ಉಸಿರಾಟದ ಸೋಂಕು ಕಾಣಿಸಿಕೊಂಡಿದ್ದು ನಾವು ಚಿಕಿತ್ಸೆ ನೀಡುತ್ತಿದ್ದೇವೆ. ಪ್ರಸ್ತುತ ಅವರನ್ನು ಐಸಿಯುನಲ್ಲಿ ಇರಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅವರಿಗೆ ಶ್ವಾಸಕೋಶದಲ್ಲಿ ಸೋಂಕು ಕಂಡು ಬಂದಿದೆ ಎನ್ನಲಾಗಿದೆ. ಕೊರೊನಾ ಪರೀಕ್ಷೆ ನಡೆಸಲಾಗಿದ್ದು ವರದಿ ನೆಗೆಟಿವ್ ಆಗಿದೆ. ಈ ಹಿನ್ನೆಲೆ ಪ್ರಸ್ತುತ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕಳೆದ ನಾಲ್ಕು ವರ್ಷದಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ಅವರು ಜೈಲುವಾಸ ಶಿಕ್ಷೆ ಮುಗಿಸಿ ಜನವರಿ 27ಕ್ಕೆ ಜೈಲಿನಿಂದ ಬಿಡುಗಡೆ ಹೊಂದುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದ್ದು ಈ ನಡುವೆ ಅವರು ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ್ದಾರೆ.