ಬೆಂಗಳೂರು, ಜ.21 (DaijiworldNews/MB) : ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ನಟಿ ರಾಗಿಣಿ ದ್ವಿವೇದಿಗೆ ಕೊನೆಗೂ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿ ರಾಗಿಣಿ ದ್ವಿವೇದಿಯು ಕೊನೆಗೂ ಅಲ್ಲಿಂದ ಬಿಡುಗಡೆ ಹೊಂದುವ ಅವಕಾಶ ಪಡೆದಿದ್ದಾರೆ.
ಸೆಪ್ಟೆಂಬರ್ 4ರಂದು ರಾಗಿಣಿಯನ್ನು ಸಿಸಿಬಿ ಪೊಲೀಸರು ಡ್ರಗ್ಸ್ ದಂಧೆ ಪ್ರಕರಣದಲ್ಲಿ ಬಂಧಿಸಿದ್ದು, ಅವರ ವಿರುದ್ಧ ಎನ್ಡಿಪಿಎಸ್ ಮತ್ತು ಐಪಿಸಿ ಕಾಯ್ದೆಗಳಡಿಯಲ್ಲಿ ಪ್ರಕರಣಗಳು ದಾಖಲಾಗಿತ್ತು.
ಬಳಿಕ ಜಾಮೀನಿಗಾಗಿ ರಾಗಿಣಿ ಹೈಕೋರ್ಟ್ ಮೆಟ್ಟಿಲೇರಿದ್ದು ಕೋರ್ಟ್ ಜಾಮೀನು ಅರ್ಜಿ ವಿಚಾರಣೆ ಮುಂದೂಡುತ್ತಲ್ಲೇ ಹೋಯಿತು. ಬಳಿಕ ಹೈಕೋರ್ಟ್ ಡ್ರಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಸೇರಿ ಆರು ಮಂದಿಯ ಅರ್ಜಿ ವಜಾ ಮಾಡಿತ್ತು.
ಈ ಹಿನ್ನೆಲೆ ರಾಗಿಣಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದು, ಕಳೆದ ಡಿಸೆಂಬರ್ನಲ್ಲಿ ಉಚ್ಛ ನ್ಯಾಯಾಲಯ ಈ ಅರ್ಜಿ ವಿಚಾರಣೆಯನ್ನು 2021 ರ ಜನವರಿಗೆ ಮುಂದೂಡಿತ್ತು. ಇದರಿಂದಾಗಿ ರಾಗಿಣಿ ಹೊಸ ವರ್ಷವನ್ನು ಪರಪ್ಪನ ಅಗ್ರಹಾರದಲ್ಲೇ ಕಳೆಯುವಂತಾಯಿತು.
ಗುರುವಾರ ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಕೊನೆಗೂ ರಾಗಿಣಿಗೆ ಜಾಮೀನು ನೀಡಿದೆ.