ಜೈಪುರ,ಜ.21 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ವಿರೋಧಿಸಿ ರೈತರ ಪ್ರತಿಭಟನೆಯಲ್ಲಿ ಸೇರಿಕೊಂಡಿರುವ ಕೆಲ ಧರಣಿ ನಿರತರು ಉಗ್ರಗಾಮಿಗಳು" ಎಂದು ಬಿಜೆಪಿ ಸಂಸದೆ ಜಸ್ಕೌರ್ ಮೀನಾ ಹೇಳಿಕೆ ನೀಡಿದ್ದು, ಆ ಮೂಲಕ ವಿವಾದ ಹುಟ್ಟುಹಾಕಿದ್ದಾರೆ.
ದೌಸಾ ಸಂಸದೆ ಜಸ್ಕೌರ್ ಮೀನಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ವೀಡಿಯೊ ತುಣುಕೊಂದರಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಬಗ್ಗೆ ಹೀಗೆ ಮಾತನಾಡಿರುವುದು ಕೇಳಿಸುತ್ತಿದ್ದು, "ಉಗ್ರಗಾಮಿಗಳು ಪ್ರತಿಭಟನೆಯಲ್ಲಿ ಕುಳಿತಿದಿದ್ದಾರೆ ಮತ್ತು ಉಗ್ರರಲ್ಲಿ ಎಕೆ-47 ಬಂದೂಕುಗಳಿವೆ. ಅವರು ಖಲಿಸ್ತಾನ ಧ್ವಜ ನೆಟ್ಟಿದ್ದಾರೆ" ಎಂದು ಹೇಳಿದ್ದಾರೆ.
ಇನ್ನು ಸಂಸದೆಯ ಈ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿದ್ದು, ಅವರಿಗೆ ಮತ ನೀಡಿದ ರಾಜಸ್ಥಾನ ಜನತೆಗೆ ಇದರಿಂದ ಅವಮಾನವಾಗಿದೆ ಎಂದು ಹೇಳಿದೆ.
ಸಂಸದೆಯ ಈ ಹೇಳಿಕೆಯನ್ನು ಬಿಜೆಪಿ ರಾಜ್ಯ ಘಟಕ ಸಮರ್ಥಿಸಿಕೊಂಡಿದ್ದು, "ಜಸ್ಕೌರ್ ಮೀನಾ ಅವರ ಭಾವನೆಗಳು ತಪ್ಪಲ್ಲ, ರೈತ ಪ್ರತಿಭಟನೆಯಲ್ಲಿ ಪ್ರದರ್ಶನವಾಗುತ್ತಿರುವ ಧ್ವಜ ಹಾಗೂ ಕೂಗುತ್ತಿರುವ ಘೋಷಣೆಗಳು ತಪ್ಪು" ಎಂದು ಹೇಳಿದೆ.