ಬೆಂಗಳೂರು,ಜ.21 (DaijiworldNews/HR): "ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಉದ್ಯೋಗ ಇಲ್ಲ, ಅವರು ಈಗ ನಿರುದ್ಯೋಗಿಗಳಾಗಿದ್ದು, ಉದ್ಯೋಗ ಹುಡುಕಿಕೊಂಡು ಅಲೆದಾಡುತ್ತಿದ್ದಾರೆ" ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಕೃಷಿ ಕಾಯ್ದೆ ಜಾರಿಗೆ ಬಂದಿದ್ದು ಈಗ ಅಲ್ಲ ಇದಕ್ಕಿಂತ ಹಿಂದೆ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಆಡಳಿತದಲ್ಲಿಯೂ ಪ್ರಾರಂಭ ಆಗಿದ್ದು. ಆದರೆ ಇದರ ಬಗ್ಗೆ ದೇಶದಲ್ಲಿ ದೊಡ್ಡ ಹೋರಾಟ ಆಗಿರಲಿಲ್ಲ, ಆದರೆ ಈಗ ಕಾಂಗ್ರೆಸ್ ನವರಿಗೆ ಏನು ಕೆಲಸ ಇಲ್ಲ ಆದ ಕಾರಣ ಕೃಷಿ ಕಾಯ್ದೆಯನ್ನು ಇಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ" ಎಂದರು.
ಇನ್ನು ಕೃಷಿ ಕಾಯ್ದೆಯನ್ನು ಹಿಂಪಡೆಯುವಂತೆ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಕೇಂದ್ರ ಸರ್ಕಾರದ ವಿರುದ್ಧ ಬುಧವಾರದಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದ್ದಾರೆ ಎನ್ನಲಾಗಿದೆ.