ಬೆಂಗಳೂರು, ಜ.21 (DaijiworldNews/MB) : ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆಯಡಿ ವಿಪ್ರೋ ಸಂಸ್ಥೆಯ ಸಂಸ್ಥಾಪಕ, ಉದ್ಯಮಿ ಅಜೀಮ್ ಪ್ರೇಮ್ಜಿ, ಅವರ ಪತ್ನಿ ಯಾಸ್ಮಿನ್ ಎ ಪ್ರೇಮ್ಜಿ ಮತ್ತು ಪಿ.ವಿ ಶ್ರೀನಿವಾಸನ್ ವಿರುದ್ಧದ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ರದ್ದುಪಡಿಸಿದೆ.
ಚೆನ್ನೈ ಮೂಲದ ಇಂಡಿಯನ್ ಅವೇಕ್ ಫಾರ್ ಟ್ರಾನ್ಸ್ಪರೆನ್ಸಿ ಸಂಸ್ಥೆಯು, ಮೂರು ಕಂಪನಿಗಳ ಆಸ್ತಿಯನ್ನು ಟ್ರಸ್ಟ್ಗೆ ವರ್ಗಾವಣೆ ಮಾಡಲಾಗಿದೆ. 2013ರ ಕಂಪನಿ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿ ಸಲ್ಲಿಸಿತ್ತು. ಅಜೀಮ್ ಪ್ರೇಮ್ಜಿ ಮತ್ತು ಇನ್ನಿಬ್ಬರು ಮೂರು ಕಂಪನಿಗಳಿಗೆ ನಿರ್ದೇಶಕರಾಗಿದ್ದಾರೆ. ಕಂಪನಿಯ ಒಡೆತನದಲ್ಲಿಯೇ ಎಲ್ಲಾ ಷೇರುಗಳೂ ಇವೆ. ಆದರೆ ಏತನ್ಮಧ್ಯೆ ಈ ಮೂರು ಕಂಪನಿಯ ಆಸ್ತಿಯನ್ನು ಪ್ರೇಮ್ಜಿ ದಂಪತಿ ಒಡೆತನದ ಟ್ರಸ್ಟ್ಗೆ ವರ್ಗಾವಣೆ ಮಾಡಲಾಗಿದೆ. ಒಂದು ವೇಳೆ ಕಂಪನಿ ಬಿಕ್ಕಟ್ಟಿಗೆ ಒಳಗಾದರೆ ಸಂಪೂರ್ಣ ಸ್ವತ್ತು ಸರ್ಕಾರದ ವಶಕ್ಕೆ ಬರುತ್ತಿತ್ತು. ಆದರೆ ಈಗ ಅವರು ಟ್ರಸ್ಟ್ಗೆ ವರ್ಗಾವಣೆ ಮಾಡಿರುವುದರಿಂದ ಸರ್ಕಾರ ವಶಕ್ಕೆ ಪಡೆದಯಲು ಸಾಧ್ಯವಿಲ್ಲ ಎಂದು ದೂರಿನಲ್ಲಿ ಇಂಡಿಯನ್ ಅವೇಕ್ ಫಾರ್ ಟ್ರಾನ್ಸ್ಪರೆನ್ಸಿ ಸಂಸ್ಥೆ ಹೇಳಿತ್ತು.
ಇಂಡಿಯನ್ ಅವೇಕ್ ಫಾರ್ ಟ್ರಾನ್ಸ್ಪರೆನ್ಸಿ ಸಂಸ್ಥೆಯ ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಈ ದೂರನ್ನು ರದ್ದುಮಾಡಿದ್ದಾರೆ. ''ಅರ್ಜಿದಾರರು ಮಾಡಿದ್ದ ದೂರಿಗೆ ಆರ್ಬಿಐ 2017ರ ಸೆ.5ರಂದು ಸಮಗ್ರ ಉತ್ತರ ನೀಡಿದೆ. ಆದರೂ ಅರ್ಜಿಯನ್ನು ಸಲ್ಲಿಸಿ ನ್ಯಾಯಾಂಗವನ್ನು ದುರ್ಬಳಕೆ ಮಾಡುತ್ತಿದ್ದಾರೆ. ಯಾವುದೇ ತಕರಾರು ಇದ್ದರೂ ಸೂಕ್ತ ವೇದಿಕೆಯಲ್ಲಿ ಪರಿಹಾರ ಪಡೆಯಬೇಕು. ಅದನ್ನು ಹೊರತುಪಡಿಸಿ ಮ್ಯಾಜಿಸ್ಪ್ರೇಟ್ ಕೋರ್ಟ್ನಲ್ಲಿ ಖಾಸಗಿ ದೂರು ಸಲ್ಲಿಸುವುದು ಅಥವಾ ಹೈಕೋರ್ಟ್ನಲ್ಲಿ ತಕರಾರು ಅರ್ಜಿ ಸಲ್ಲಿಸುವುದು ಸರಿಯಲ್ಲ'' ಎಂದು ಕೋರ್ಟ್ ಹೇಳಿದೆ.