ನವದೆಹಲಿ, ಜ.21 (DaijiworldNews/PY): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಮೇರಿಕಾದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಜೊ ಬಿಡೆನ್ ಅವರಿಗೆ ಅಭಿನಂದನೆ ತಿಳಿಸಿದ್ದು, "ಅಮೇರಿಕಾದ ಪ್ರಜಾಪ್ರಭುತ್ಚದಲ್ಲಿ ನೂತನ ಅಧ್ಯಾಯ ಪ್ರಾರಂಭವಾಗಿದೆ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಅಮೇರಿಕಾದ ಪ್ರಜಾಪ್ರಭುತ್ವದಲ್ಲಿ ನೂತನವಾದ ಅಧ್ಯಾಯ ಪ್ರಾರಂಭವಾಗಿದೆ. ಅಮೇರಿಕಾದ ಹೊಸ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಜೊ ಬಿಡೆನ್ ಹಾಗೂ ಅಮೇರಿಕಾದ ಪ್ರಥಮ ಉಪಾಧ್ಯಕ್ಷೆಯಾಗಿ ಪದಗ್ರಹಣ ಮಾಡಿರುವ ಕಮಲಾ ಹ್ಯಾರಿಸ್ ಅವರಿಗೆ ಶುಭಾಶಯಗಳು" ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಶುಭಕೋರಿದ್ದು, "ಅಮೇರಿಕಾ ಹಾಗೂ ಭಾರತದ ವ್ಯೂಹಾತ್ಮಕ ಸಹಭಾಗಿತ್ವವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಜೊ ಬಿಡೆನ್ ಅವರೊಂದಿಗೆ ಕೈಜೋಡಿಸಲು ನಾವು ಬದ್ದ" ಎಂದಿದ್ದಾರೆ.
ಅಮೇರಿಕಾದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ 78 ವರ್ಷದ ಜೋ ಬಿಡೆನ್ ಮತ್ತು ಉಪಾಧ್ಯಕ್ಷೆಯಾಗಿ ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದರು.
ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಅಮೇರಿಕಾದ ಅಧ್ಯಕ್ಷ ಜೊ ಬಿಡೆನ್ ಅವರು ಡೊನಾಲ್ಡ್ ಟ್ರಂಪ್ ಸರ್ಕಾರದ ಮುಸ್ಲೀಮರ ಪ್ರಯಾಣ ನಿಷೇಧ ನೀತಿಯ ತೆರವು ಸೇರಿ 17 ಪ್ರಮುಖ ಆದೇಶಗಳಿಗೆ ಬಿಡೆನ್ ಹಸ್ತಾಕ್ಷರ ಹಾಕಿದ್ದಾರೆ.