ಬೆಂಗಳೂರು, ಜ 20(DaijiworldNews/SM): ರಾಜ್ಯದಲ್ಲಿ ಕೆಲವು ತಿಂಗಳುಗಳಿಂದ ಚರ್ಚೆಗೆ ಗ್ರಾಸವಾಗಿರುವ ಶಾಲಾ ಶುಲ್ಕ ಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಒಂದೆರಡು ದಿನಗಳಲ್ಲಿ ಪ್ರಸಕ್ತ ಸಾಲಿನ ಶುಲ್ಕ ನಿಗದಿಗೊಳಿಸಲಾಗುವುದೆಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಶುಲ್ಕ ನಿಗದಿ ಪಡಿಸುವ ಕುರಿತು ಏಕಾಏಕಿ ನಿರ್ಧಾರ ಕೈಗೊಳ್ಳಲಾಗುವುದಿಲ್ಲ. ಈ ಅವಧಿಯಲ್ಲಿ ಕೊರೋನಾದಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯಾರ್ಥಿಗಳ ಪೋಷಕರ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಅವುಗಳ ಜೊತೆಗೆ ಹದಗೆಟ್ಟಿರುವ ಶಾಲೆಗಳ ಸ್ಥಿತಿಗತಿಗಳನ್ನು ಕೂಡ ಪರಿಗಣಿಸಬೇಕಿದೆ ಎಂದರು.
ಹಾಗಾಗಿ ತಾಂತ್ರಿಕ ಸಲಹಾ ಸಮಿತಿ ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅದನ್ನು ಇನ್ನೂ ಪರಿಶೀಲಿಸಿಲ್ಲ. ಯಾರಿಗೂ ಅನ್ಯಾಯವಾಗದಂತೆ ಶುಲ್ಕ ನಿಗದಿಪಡಿಸಲಾಗುವುದು ಎಂದರು. ಇನ್ನುಳಿದಂತೆ 8 ಹಾಗೂ 9ನೇ ತರಗತಿಗಳನ್ನು ಆರಂಭಿಸುವ ಕುರಿತಂತೆಯೂ ಆಗ್ರಹಗಳು ಕೇಳಿಬರುತ್ತಿದೆ. ಈ ಬಗ್ಗೆ ತಾಂತ್ರಿಕ ಸಲಹ ಸಮಿತಿ ವರದಿ ನೀಡಿ ನಿರ್ಧರಿಸಲಾಗುವುದೆಂದರು.