ಲಕ್ನೋ, ಜ.20 (DaijiworldNews/MB) : ಉತ್ತರ ಪ್ರದೇಶದ ವಿಧಾನ ಪರಿಷತ್ತಿನ ಗ್ಯಾಲರಿಯಲ್ಲಿ ಹಿಂದೂ ವಿಚಾರವಾದಿ ವೀರ್ ಸಾವರ್ಕರ್ನ ಭಾವ ಚಿತ್ರವನ್ನು ಹಾಕಲಾಗಿದ್ದು, ದಕ್ಕೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ(ಎಸ್ಪಿ) ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈ ಬಗ್ಗೆ ಕಾಂಗ್ರೆಸ್ ನಾಯಕ ದೀಪಕ್ ಸಿಂಗ್ ವಿಧಾನ ಪರಿಷತ್ ಸಭಾಪತಿ ಅವರಿಗೆ ಪತ್ರ ಬರೆದಿದ್ದು, ''ಬ್ರಿಟಿಷ್ ಆಡಳಿತ ಮತ್ತು ದೇಶ ವಿಭಜಿಸಲು ಮುಸ್ಲಿಂ ಲೀಗ್ ನಾಯಕ ಮೊಹಮ್ಮದ್ ಅಲಿ ಜಿನ್ನಾಗೆ ಬೆಂಬಲ ನೀಡಿದ ವ್ಯಕ್ತಿಯ ಸಾವರ್ಕರ್ ಭಾವಚಿತ್ರವನ್ನು ವಿಧಾನಪರಿಷತ್ ಗ್ಯಾಲರಿಯಲ್ಲಿ ಹಾಕಿರುವುದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನವಾಗಿದ್ದು ಅದನ್ನು ಅಲ್ಲಿಂದ ತೆಗೆಯಬೇಕು'' ಎಂದು ಆಗ್ರಹಿಸಿದ್ದಾರೆ. ಹಾಗೆಯೇ ''ಸಾವರ್ಕರ್ ಭಾವ ಚಿತ್ರವನ್ನು ಹಾಕಲು ಯಾವುದೇ ದೇಶಭಕ್ತರು ಒಪ್ಪಿಕೊಳ್ಳುವುದಿಲ್ಲ'' ಎಂದು ಕೂಡಾ ಈ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ಈ ಬಗ್ಗೆ ವಿವರಣೆ ನೀಡುವಂತೆ ಅಧಿಕಾರಿಗಳಿಗೆ ವಿಧಾನ ಪರಿಷತ್ ಸಭಾಪತಿ ಅವರು ಸೂಚಿಸಿದ್ದಾರೆ.
ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್, ''ಸಾವರ್ಕರ್ ಹೆಸರಿನಲ್ಲಿ ವಾದ ವಿವಾದಗಳಿವೆ. ಅವರು ಜೈಲಿನಿಂದ ಹೊರ ಬರಲು ಬ್ರಿಟಿಷರಲ್ಲಿ ಕ್ಷಮೆಯಾಚಿಸಿದ್ದರು'' ಎಂದು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಬಿಜೆಪಿ ನಾಯಕ ಅಲ್ಲಗಳೆದಿದ್ದು, ''ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ, ಜನರ ಸ್ಪೂರ್ತಿ'' ಎಂದು ಹೇಳಿದ್ದಾರೆ.