ಬೆಂಗಳೂರು, ಜ.20 (DaijiworldNews/PY): "ಕೃಷಿ ಇಲಾಖೆಯಲ್ಲಿ ವರ್ಗಾವಣೆ ಹೆಸರಿನಲ್ಲಿ ಸಚಿವರು, ಅಧಿಕಾರಿಗಳಿಂದ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಇಲಾಖೆ ಸಿಬ್ಬಂದಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ" ಎಂದು ಜೆಡಿಎಸ್ ಶಾಸಕ ಸಾರಾ ಮಹೇಶ್ ಹೇಳಿದ್ದಾರೆ.
ಈ ಬಗ್ಗೆ ಟ್ಬೀಟ್ ಮಾಡಿರುವ ಅವರು, "ಕೃಷಿ ಇಲಾಖೆಯಲ್ಲಿ ವರ್ಗಾವಣೆ ಹೆಸರಿನಲ್ಲಿ ಸಚಿವರು, ಅಧಿಕಾರಿಗಳಿಂದ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಇಲಾಖೆ ಸಿಬ್ಬಂದಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಸಮಸ್ಯೆ ಸರಿಪಡಿಸದಿದ್ದರೆ ಸಾಮೂಹಿಕವಾಗಿ ದಯಾಮರಣಕ್ಕೆ ಅರ್ಜಿ ಸಲ್ಲಿಸುವುದಾಗಿ ಎಚ್ಚರಿಸಿದ್ದಾರೆ. ಈ ಭ್ರಷ್ಟಾಚಾರ ಆರೋಪ ಬಂದಿದ್ದು ಹೇಗೆ? ಇದು ಎಂಥ ದೌರ್ಬಲ್ಯ?" ಎಂದು ಕೇಳಿದ್ದಾರೆ.
"ಆತ್ಮಹತ್ಯೆ ಮಾಡಿಕೊಳ್ಳುವ ರೈತರು ದುರ್ಬಲ ಮನಸ್ಸಿನವರು ಎನ್ನುವ ಕೃಷಿ ಸಚಿವ ಬಿ.ಸಿ. ಪಾಟೀಲರು ತಮ್ಮ ಹಣದ ದೌರ್ಬಲ್ಯದ ಬಗ್ಗೆ ಏಕೆ ಮಾತಾಡುವುದಿಲ್ಲ? ರೈತನ ಸಂಕಷ್ಟದ ಪರಿಸ್ಥಿತಿಯನ್ನು ಗೇಲಿ ಮಾಡುವ ಬಿ.ಸಿ. ಪಾಟೀಲ್ ವರ್ತನೆಯೇ ದುರ್ಬಲ ಮನಸ್ಸಿನ ಪ್ರತೀಕ. ಅವರ ವರ್ತನೆ ಅಕ್ಷಮ್ಯ. ಕೈಲಾದರೆ ರೈತರಿಗೆ ಒಳ್ಳೆದು ಮಾಡಿ, ಹೀಗೆಲ್ಲ ಮಾತನಾಡಬೇಡಿ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಬಿ.ಸಿ. ಪಾಟೀಲ್ ಮೊದಲು ರೈತರ ಕ್ಷಮೆ ಕೇಳಬೇಕು. ಕೃಷಿ ಇಲಾಖೆಯ ಸಿಬ್ಬಂದಿಯೇ ಮಾಡಿರುವ ಲಂಚದ ಆರೋಪದ ಕುರಿತು ಸ್ಪಷ್ಟನೆ ನೀಡಬೇಕು. ಸರ್ಕಾರ ಈ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕು. ಭ್ರಷ್ಟಾಚಾರ ಸಾಬೀತಾದರೆ ಬಿ.ಸಿ. ಪಾಟೀಲ್ ಅವರನ್ನು ಮುಲಾಜಿಲ್ಲದೇ ಮಂತ್ರಿಮಂಡಲದಿಂದ ಹೊರದಬ್ಬಬೇಕು ಎಂದು ಆಗ್ರಹಿಸುತ್ತೇನೆ" ಎಂದಿದ್ದಾರೆ.