ಬೆಂಗಳೂರು, ಜ.20 (DaijiworldNews/PY): "ಭಿಕ್ಷೆ ಬೇಡುತ್ತಿರುವ, ಶಾಲೆಗಳಿಂದ ಹೊರಗುಳಿದ, ಮಾರುಕಟ್ಟೆಗಳಲ್ಲಿ ಹಾಗೂ ಬಸ್ ನಿಲ್ದಾಣಗಳಲ್ಲಿ ಕೆಲಸ ಮಾಡುತ್ತಿರುವ ಮಕ್ಕಳು ಸೂಕ್ತವಾಗಿ ಶಿಕ್ಷಣ ಪಡೆಯುತ್ತಿದ್ದಾರೆಯೇ ಎನ್ನುವ ವಿಚಾರವನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು" ಎಂದು ಹೈಕೋರ್ಟ್ ನ್ಯಾ. ವಿ.ಶ್ರೀಶಾನಂದ ತಿಳಿಸಿದ್ದಾರೆ.
ಮಕ್ಕಳು ಭಿಕ್ಷಾಟನೆ ಹಾಗೂ ಮಾರುಕಟ್ಟೆ ವ್ಯಾಪಾರಗಳಲ್ಲಿ ಕೆಲಸ ಮಾಡುವುದನ್ನು ತಡೆಯುವ ಬಗ್ಗೆ ನಗರ ಕಾರ್ಯಪಡೆ ಸಮಿತಿಯ ಸದಸ್ಯರಿಗಾಗಿ ಏರ್ಪಡಿಸಿದ್ದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, "ವಿದ್ಯಾಭ್ಯಾಸ ಮಾಡಬೇಕಾದ ಮಕ್ಕಳು ಭಿಕ್ಷಾಟನೆಯಲ್ಲಿ ಏಕೆ ತೊಡಗಿದ್ದಾರೆ. ಈ ವಿಚಾರದ ಬಗ್ಗೆ ನಾನು ಚಿಂತನೆ ಮಾಡಬೇಕಿದೆ. ಈ ಬಗ್ಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ನಿಸ್ವಾರ್ಥದಿಂದ ಕಾರ್ಯ ನಿರ್ವಹಿಸುವುದು ಅಗತ್ಯ" ಎಂದಿದ್ದಾರೆ.
"ಮಕ್ಕಳು ಬೀದಿ ಬದಿ ವ್ಯಾಪಾರ ಹಾಗೂ ಭಿಕ್ಷಾಟನೆಯಲ್ಲಿ ತೊಡಗಿರುವುದನ್ನು ತಡೆಯುವ ನಿಟ್ಟಿನಲ್ಲಿ ವಲಯವಾರು ತಂಡಗಳನ್ನು ರಚನೆ ಮಾಡಿ ಸಮೀಕ್ಷೆ ನಡೆಸಲಾಗುವುದು" ಎಂದು ತಿಳಿಸಿದ್ದಾರೆ.
ಬಳಿಕ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್, "ಮಕ್ಕಳು ಭಿಕ್ಷಾಟನೆ ಮಾಡಲು ಕಾರಣವೇನು? ಅವರ ಹಿನ್ನೆಲೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಸಮೀಕ್ಷೆ ನಡೆಸುವ ಸಂದರ್ಭ ಮಕ್ಕಳೊಂದಿಗೆ ಸಂಯಮದಿಂದ ವರ್ತಿಸಿ ಮಾಹಿತಿ ಕಲೆಹಾಕಬೇಕು" ಎಂದು ಹೇಳಿದ್ದಾರೆ.
"ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಮಕ್ಕಳಿಗೆ ವಿಧ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ ಮನೆ ಬಾಗಿಲಿಗೆ ಶಾಲೆ ಎನ್ನುವ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ. ಇದಕ್ಕಾಗಿ ಬಸ್ಗಳನ್ನೇ ಶಾಲೆಗಳನ್ನಾಗಿ ಪರಿವರ್ತಿಸಿ ವಿದ್ಯಾಭ್ಯಾಸಕ್ಕಾಗಿ ಉಪಯೋಗಿಸಲಾಗುತ್ತದೆ. ಈ ವಿಚಾರದ ಬಗ್ಗೆ ಈಗಾಗಲೇ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತುಕತೆಯಾಗಿದೆ. ಇದಕ್ಕಾಗಿ ಪಾಲಿಕೆಯು ಬಿಎಂಟಿಸಿಯಿಂದ ಹತ್ತು ಬಸ್ಗಳನ್ನು ಪಡೆದುಕೊಂಡಿದೆ" ಎಂದಿದ್ದಾರೆ.
"ಶಿಕ್ಷಕರು ಹಾಗೂ ಚಾಲಕರನ್ನು ಪಾಲಿಕೆಯ ವತಿಯಿಂದಲೇ ನೇಮಕ ಮಾಡಲಾಗುತ್ತದೆ. ಅಧಿಕ ಮಕ್ಕಳಿರುವ ಕೊಳಗೇರಿ ಪ್ರದೇಶಗಳನ್ನು ಗುರುತಿಸಿ ಅಲ್ಲಿಗೆ ಬಸ್ಗಳನ್ನು ಕಳುಹಿಸಲಾಗುತ್ತದೆ. ಅಲ್ಲದೇ, ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕೂಡಾ ಮಾಡಲಾಗುತ್ತದೆ" ಎಂದು ಹೇಳಿದ್ದಾರೆ.
"ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನ ಆಯುಕ್ತರು ಹಾಗೂ ಸೌದಿ ಅರೇಬಿಯಾದ ದೂತವಾಸದಿಂದ ಕರೆ ಬಂದಿದ್ದು, ಭಿಕ್ಷಾಟನೆ ಮಾಡುತ್ತಿದ್ದ ಸುಮಾರು 70-80 ಮಕ್ಕಳನ್ನು ಅವರು ವಶಪಡಿಸಿಕೊಂಡಿದ್ದಾರೆ" ಎಂದು ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಭಾರತದಿಂದ ಕಳ್ಳಸಾಗಣೆ ಮಾಡಲ್ಪಟ್ಟ ಮಕ್ಕಳು ಮುಖ್ಯವಾಗಿ ಉತ್ತರಪ್ರದೇಶ ಹಾಗೂ ಬಿಹಾರ ಮೂಲದವರಾಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ರೀತಿಯಾದ ದಂಧೆಗಳು ಬೆಂಗಳೂರಿನಲ್ಲಿ ಕೂಡಾ ನಡೆಯುತ್ತಿದ್ದು, ಇದನ್ನು ತಡೆಯಬೇಕು ಎಂದಿದ್ದಾರೆ.