ಬೆಂಗಳೂರು, ಜ.20 (DaijiworldNews/MB) : ''ರಾಜ್ಯದಲ್ಲಿ ಜನತಾ ಪರಿವಾರವನ್ನು ಬಿಹಾರ ಮಾದರಿಯಲ್ಲಿ ಒಂದಾಗಿಸುತ್ತೇವೆ'' ಎಂದು ಹೇಳಿದ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಅವರು ಇದೇ ವೇಳೆ, ''ನಮಗೆ ಸಭಾಪತಿ ಸ್ಥಾನ ಕೊಡಬೇಕು, ನಾವೇನೂ ಸನ್ಯಾಸಿಗಳಲ್ಲ'' ಎಂದು ಹೇಳಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ನಾವು ಮಧು ಬಂಗಾರಪ್ಪ ಮನವೊಲಿಕೆ ಮಾಡುತ್ತೇವೆ. ಹಾಗೆಯೇ ಜಿ.ಟಿ ದೇವೇಗೌಡರನ್ನೂ ಭೇಟಿ ಮಾಡುತ್ತೇವೆ. ಗುಬ್ಬಿ ಶ್ರೀನಿವಾಸ್ ಸೇರಿದಂತೆ ಪಕ್ಷದಲ್ಲಿ ಅಸಮಾಧಾನ ಹೊಂದಿರುವ ಎಲ್ಲರನ್ನೂ ಭೇಟಿಯಾಗುತ್ತೇವೆ. ನಮ್ಮಲ್ಲಿ ಸಂವಹನದ ಕೊರೆತೆಯಿದ್ದು, ಎಲ್ಲವನ್ನೂ ಮಾತುಕತೆ ನಡೆಸಿ ಸರಿಪಡಿಸುತ್ತೇವೆ'' ಎಂದು ಹೇಳಿದ್ದು, ಇದೇ ವೇಳೆ, ''ಯಾರು ಏನೇ ಹೇಳಿದರೂ ನಮ್ಮವರು ನಂಬುತ್ತಾರೆ. ಜನತಾ ಪರಿವಾರದಿಂದ ಬೇರೆ ಪಕ್ಷಗಳಿಗೆ ಹೋದವರು ಸೋಲುಂಡಿದ್ದಾರೆ'' ಎಂದು ಕೂಡಾ ಹೇಳಿದರು.
ವಿಧಾನ ಪರಿಷತ್ನಲ್ಲಿ ಜೆಡಿಎಸ್ – ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ''ಜೆಡಿಎಸ್ಗೆ ಪರಿಷತ್ ಸಭಾಪತಿ ಸ್ಥಾನ ದೊರೆಯಲಿದೆ. ಈಗಾಗಲೇ ಹೆಚ್.ಡಿ ದೇವೇಗೌಡರು ನನ್ನನ್ನು ಸಭಾಪತಿಯನ್ನಾಗಿ ಮಾಡುವ ತೀರ್ಮಾನ ಮಾಡಿದ್ದಾರೆ. ಸಭಾಪತಿ ಸ್ಥಾನದ ಆಕಾಂಕ್ಷಿಗಳು ಬಿಜೆಪಿಯಲ್ಲೂ ಇರಬಹುದು. ಅವರು 31 ಮಂದಿ ಇದ್ದೇವೆ ನಮಗೆ ಸಭಾಪತಿ ಸ್ಥಾನ ನೀಡಿ ಎಂದು ವಾದಿಸಿದರೆ ನಾವು ಹದಿನಾಲ್ಕು ಸದಸ್ಯರು ಇದ್ದೇವಲ್ಲ. ಏನು ಮಾಡುವುದಾದರೂ ನಮ್ಮ ಬೆಂಬಲ ಬೇಕಲ್ಲವೇ'' ಎಂದು ಬಿಜೆಪಿಗೆ ಪರೋಕ್ಷ ಎಚ್ಚರಿಕೆ ನೀಡಿದರು.
ವಿಧಾನಪರಿಷತ್ನಲ್ಲಿ ಸಭಾಪತಿ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆ ವಿಚಾರದಲ್ಲಿ ಮಾತನಾಡಿದ ಅವರು, ''ಬಿಜೆಪಿಯ ಅವಿಶ್ವಾಸ ನಿರ್ಣಯ ಮಂಡನೆಗೆ ನಮ್ಮ ಬೆಂಬಲವೂ ಇದೆ. ನಾವು ಸಹಿ ಹಾಕಿ ಇರಿಸಿದ್ದು, ವರಿಷ್ಠರು ಹೇಳಿದ ಕೂಡಲೇ ಕಾರ್ಯದರ್ಶಿಗೆ ನೀಡುತ್ತೇವೆ'' ಎಂದು ತಿಳಿಸಿದರು.