ನವದೆಹಲಿ, ಜ.20 (DaijiworldNews/PY): "ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗೆ ಸಂಬಂಧಿಸಿದಂತೆ ರೈತ ಮುಖಂಡರು ಹಾಗೂ ಕೇಂದ್ರ ಸರ್ಕಾರದ ನಡುವೆ ನಡೆದ ಎಲ್ಲಾ ಬೆಳವಣಿಗೆಗಳನ್ನು ಬದಿಗಿಟ್ಟು ಹೊಸ ಮಾತುಕತೆಗಳನ್ನು ಆರಂಭಿಸಬೇಕು" ಎಂದು ಕೇಂದ್ರವನ್ನು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಒತ್ತಾಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಇಂದು ರೈತರು ಹಾಗೂ ಕೇಂದ್ರ ಸರ್ಕಾರದ ನಡುವೆ 10ನೇ ಸುತ್ತಿನ ಮಾತುಕತೆ ನಡೆಯಲಿದೆ. ಸರ್ಕಾರವು ಹಿಂದೆ ನಡೆದ ಮಾತುಕತೆಗಳನ್ನು ಬದಿಗಿಟ್ಟು ಹೊಸದಾದ ಮಾತುಕತೆಗಳನ್ನು ಆರಂಭಿಸುವವರೆಗೆ ನಾವು ಹೇಗೆ ಸಕಾರಾತ್ಮಕ ಫಲಿತಾಂಶವನ್ನು ನಿರೀಕ್ಷಿಸಲು ಸಾಧ್ಯ" ಎಂದು ಕೇಳಿದ್ದಾರೆ.
"ಖಚಿತವಾದ ತೀರ್ಮಾನ ಇಲ್ಲದ ಹಿನ್ನೆಲೆ ಕೃಷಿ ಕಾಯ್ದೆಗಳ ಬಗ್ಗೆ ಕೇಂದ್ರ ಹಾಗೂ ರೈತ ಸಂಘಟನೆಗಳ ಪ್ರತಿನಿಧಿಗಳ ನಡುವೆ ನಡೆದ 9 ನೇ ಸುತ್ತಿನ ಮಾತುಕತೆ ವಿಫಲವಾಗಿದೆ. ಇಂದು ಹತ್ತನೇ ಸುತ್ತಿನ ಮಾತುಕತೆ ನಡೆಯಲಿದೆ. ಹಳೆಯ ಮಾತುಕತೆಗಳನ್ನು ಬದಿಗಿಟ್ಟು, ಮುಂದೆ ಏನು ಮಾಡಬೇಕು, ಯಾವ ವಿಷಯಗಳನ್ನು ಬಿಡಬೇಕು ಎನ್ನುವ ವಿಚಾರವನ್ನು ಇಟ್ಟುಕೊಂಡು ಸ್ಪಷ್ಟವಾಗಿ ಹೊಸತಾದ ಮಾತುಕತೆಯನ್ನು ಪ್ರಾರಂಭಿಸಿ" ಎಂದು ತಿಳಿಸಿದ್ದಾರೆ.