ಮಂಗಳೂರು, ಜ.20 (DaijiworldNews/MB) : ಆಕ್ಷೇಪರ್ಹ ವಸ್ತುಗಳು ಹಾಗೂ ನಿಂದನಾರ್ಹ ಬರಹಗಳುಲ್ಲ ಭಿತ್ತಿಪತ್ರವನ್ನು ಕಾಣಿಕೆ ಡಬ್ಬಿಗೆ ಹಾಕಲಾಗಿದ್ದ ಉಳ್ಳಾಲದ ಕೇಂದ್ರ ಬಸ್ ನಿಲ್ದಾಣದಲ್ಲಿರುವ ಸ್ವಾಮಿ ಕೊರಗಜ್ಜ ಮತ್ತು ಗುಳಿಗಜ್ಜನ ಕಟ್ಟೆಗೆ ಜನವರಿ 20 ರ ಬುಧವಾರ ಪೊಲೀಸ್ ಆಯುಕ್ತ ಎನ್ ಶಶಿ ಕುಮಾರ್ ಅವರು ಭೇಟಿ ನೀಡಿದರು.
ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತರು, "ಇಂತಹ ಘಟನೆಗಳು ಭಕ್ತರ ಭಾವನೆಗಳನ್ನು ಘಾಸಿಗೊಳಿಸುತ್ತದೆ. ಇಂತಹ ಅಪರಾಧ ಮಾಡಿದವರನ್ನು ಪೊಲೀಸ್ ಇಲಾಖೆ ಬಿಡುವುದಿಲ್ಲ. ಇಂದಲ್ಲ ನಾಳೆ ಅವರು ಸಿಕ್ಕಿಹಾಕಿಕೊಳ್ಳುತ್ತಾರೆ. ಇಂತಹ ಕೃತ್ಯ ಮತ್ತೆ ನಡೆಯಬಾರದು'' ಎಂದು ಹೇಳಿದರು.
"ಈ ಕೃತ್ಯದ ಹಿಂದಿರುವ ಜನರನ್ನು ನಾವು ಪತ್ತೆ ಮಾಡುತ್ತೇವೆ. ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ನಾನು ಎಲ್ಲಾ ಧಾರ್ಮಿಕ ಅಧಿಕಾರಿಗಳನ್ನು ವಿನಂತಿಸುತ್ತೇನೆ. ಕೆಲವು ದುಷ್ಕರ್ಮಿಗಳು ಮಾಡಿದ ಕೃತ್ಯದಿಂದಾಗಿ ಸಮಾಜದಲ್ಲಿನ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗಲು ನಾವು ಬಿಡುವುದಿಲ್ಲ" ಎಂದು ಹೇಳಿದರು.
ಉಳ್ಳಾಲದ ಕೇಂದ್ರ ಬಸ್ ನಿಲ್ದಾಣದಲ್ಲಿರುವ ಸ್ವಾಮಿ ಕೊರಗಜ್ಜ ಮತ್ತು ಗುಳಿಗಜ್ಜನ ಕ್ಷೇತ್ರದ ಕಾಣಿಕೆ ಹುಂಡಿಗೆ ಕಿಡಿಗೇಡಿಗಳು ಕಾಂಡಮ್ ಮತ್ತು ನಿಂದನಾರ್ಹ ಬರಹಗಳುಲ್ಲ ಭಿತ್ತಿಪತ್ರವನ್ನು ಹಾಕಿ ವಿಕೃತಿ ಮೆರೆದಿದ್ದಾರೆ. ಕಾಂಡಮ್ಗಳನ್ನು ಹಾಕಿರುವುದು ಮಾತ್ರವಲ್ಲದೇ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಹಾಗೂ ಇನ್ನಿತರ ಬಿಜೆಪಿ ನಾಯಕರ ಚಿತ್ರಗಳನ್ನು ವಿರೂಪಗೊಳಿಸಿ ಅವಹೇಳನಕಾರಿ ಬರಹಗಳನ್ನು ಬರೆಯಲಾಗಿದೆ.