ಜಮ್ಮು, ಜ.20 (DaijiworldNews/PY): ಜ.19ರ ಮಂಗಳವಾರ ರಾತ್ರಿ ಜಮ್ಮುವಿನ ಅಖ್ನೂರ್ನ ಖೌರ್ ಸೆಕ್ಟರ್ ಬಳಿಯ ಎಲ್ಒಸಿ ಬಳಿ ಭಾರತದ ಭೂಪ್ರದೇಶದತ್ತ ನುಸುಳಲು ಯತ್ನಿಸುತ್ತಿದ್ದ ಭಾರೀ ಶಸ್ತ್ರಸಜ್ಜಿತ ಮೂವರು ಉಗ್ರರನ್ನು ಭಾರತೀಯ ಯೋಧರು ಹತ್ಯೆಗೈದಿದ್ದಾರೆ. ಘಟನೆಯಲ್ಲಿ ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸೋಮವಾರ ಹಾಗೂ ಮಂಗಳವಾರ ರಾತ್ರಿ ಭಾರೀ ಶಸ್ತ್ರಸಜ್ಜಿತ ಐವರು ಉಗ್ರರು ಖೌರ್ ಸೆಕ್ಟರ್ನಲ್ಲಿನ ನಿಯಂತ್ರಣ ರೇಖೆಯ ಮೂಲಕ ಭಾರತದ ಕಡೆಗೆ ನುಸುಳಲು ಪ್ರಯತ್ನಿಸುತ್ತಿದ್ದರು. ಅವರನ್ನು ಭಾರತೀಯ ಸೇನೆಯು ಗುಂಡಿನ ದಾಳಿ ನಡೆಸಿ ತಡೆಯಲು ಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಪಾಕಿಸ್ತಾನ ಸೇನೆಯು ಖೌರ್ ಸೆಕ್ಟರ್ನ ಜೋಗ್ಮಾ ಎಂಬ ಹಳ್ಳಿಯಲ್ಲಿ ಭಾರೀ ಶೆಲ್ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ನಾಲ್ಕು ಮಂದಿ ಭಾರತೀಯ ಯೋಧರು ಗಾಯಗೊಂಡಿದ್ದಾರೆ. ಈ ದಾಳಿಯ ಪ್ರತಿಕಾರವಾಗಿ, ಭಾರತದ ಕಡೆಗೆ ನುಸುಳಲು ಯತ್ನಿಸುತ್ತಿದ್ದ ಮೂವರು ಉಗ್ರನ್ನು ಭಾರತೀಯ ಯೋಧರು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.
ಮೃತಪಟ್ಟ ಮೂವರು ಉಗ್ರರ ಶವಗಳು ನಿಯಂತ್ರಣ ರೇಖೆಯ ಬಳಿ ಬಿದ್ದಿವೆ. ಆದರೆ, ಈವರೆಗೆ ಪಾಕ್ ಸೇನೆಯು ಅವುಗಳನ್ನು ತೆಗೆದುಕೊಂಡು ಹೋಗಿಲ್ಲ ಎಂದು ಮೂಲಗಳು ತಿಳಿಸಿವೆ.
ಗಾಯಗೊಂಡ ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ಎಂದು ವರದಿಗಳು ತಿಳಿಸಿವೆ.
ಉಗ್ರರ ಒಳನುಸುಳುವಿಕೆಯ ಬಗ್ಗೆ ಸೇನೆಯು ಯಾವುದೇ ಅಧಿಕೃತವಾದ ಹೇಳಿಕೆ ಬಿಡುಗಡೆಯಾಗಿಲ್ಲ. ಆದರೆ, ಮೂಲಗಳ ಪ್ರಕಾರ ಈ ಪ್ರದೇಶದಲ್ಲಿ ಇನ್ನೂ ಉಗ್ರರು ಅಡಗಿಕೊಂಡಿರುವ ಸಾಧ್ಯತೆ ಇದೆ. ಕಾರ್ಯಾಚರಣೆ ಮುಂದುವರೆದಿದೆ.
"ಈ ಉಗ್ರರು ಜೈಷ್-ಎ-ಮೊಹಮ್ಮದ್ ಸಂಘಟನೆಯಿಂದ ತರಬೇತಿ ಪಡೆದುಕೊಂಡವರಾಗಿದ್ದು, ಸುಂದರ್ಬಿನ ಸಮೀಪದ ಪ್ರದೇಶದಿಂದ ಪಿರ್ ಪಂಜಾಲ್ ಪರ್ವತಗಳನ್ನು ದಾಟಿ ದಕ್ಷಿಣ ಕಾಶ್ಮೀರವನ್ನು ತಲುಪುವ ಉದ್ದೇಶದಿಂದ ಒಳನುಗ್ಗಲು ಪ್ರಯತ್ನಿಸುತ್ತಿರಬಹುದು. ಅಥವಾ ಗಣರಾಜ್ಯೋತ್ಸವ ಸಮೀಸುತ್ತಿರುವ ಕಾರಣ ಆಚರಣೆಗೆ ಭಂಗಗೊಳಿಸುವ ಉದ್ದೇಶದಿಂದ ಈ ರೀತಿ ಮಾಡಿರಬಹುದು" ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಹೇಳಿದ್ದಾರೆ.