ಮಂಗಳೂರು, ಜ.20 (DaijiworldNews/MB) : ಉಳ್ಳಾಲದ ಕೇಂದ್ರ ಬಸ್ ನಿಲ್ದಾಣದಲ್ಲಿರುವ ಸ್ವಾಮಿ ಕೊರಗಜ್ಜ ಮತ್ತು ಗುಳಿಗಜ್ಜನ ಕ್ಷೇತ್ರದ ಕಾಣಿಕೆ ಹುಂಡಿಗೆ ಕಿಡಿಗೇಡಿಗಳು ಕಾಂಡಮ್ ಮತ್ತು ನಿಂದನಾರ್ಹ ಬರಹಗಳುಲ್ಲ ಭಿತ್ತಿಪತ್ರವನ್ನು ಹಾಕಿ ವಿಕೃತಿ ಮೆರೆದಿದ್ದಾರೆ.
ಕಾಂಡಮ್ಗಳನ್ನು ಹಾಕಿರುವುದು ಮಾತ್ರವಲ್ಲದೇ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಹಾಗೂ ಇನ್ನಿತರ ಬಿಜೆಪಿ ನಾಯಕರ ಚಿತ್ರಗಳನ್ನು ವಿರೂಪಗೊಳಿಸಿ ಅವಹೇಳನಕಾರಿ ಬರಹಗಳನ್ನು ಬರೆಯಲಾಗಿದೆ.
ಉಳ್ಳಾಲದ ಕೊರಗಜ್ಜ ಸೇವಾ ಸಮಿತಿಯವರು ಪ್ರತಿ ತಿಂಗಳ ಸಂಕ್ರಾಂತಿಯಂದು ಕಾಣಿಕೆ ಡಬ್ಬಿಯ ಹಣ ತೆಗೆಯುವ ವಾಡಿಕೆ ಹೊಂದಿದ್ದು, ಈ ಬಾರಿ ಸ್ವಲ್ಪ ತಡವಾಗಿ ಅಂದರೆ ಮಂಗಳವಾರ ಸಂಜೆ ಕಾಣಿಕೆ ಡಬ್ಬಿ ತೆರೆದಿದ್ದು, ಡಬ್ಬಿಯ ಒಳಗೆ ಕಾಂಡಾಮ್ಗಳು ಹಾಗೂ ಪ್ರಚೋಧನಕಾರಿ ಬರಹಗಳು ಇದ್ದಂತಹ ಪ್ಲೆಕ್ಸ್ ಒಂದು ಕಂಡು ಬಂದಿದೆ.
ಬೆಂಗಳೂರಿನ ಕೆ.ಆರ್. ಐಡಿಯಲ್ ನಿಗಮಾಧ್ಯಕ್ಷರಾದ ಎಂ ರುದ್ರೇಶ್ ಅವರಿಗೆ ಶುಭಕೋರಿದ ಫ್ಲೆಕ್ಸ್ ಇದಾಗಿದ್ದು, ಇದರಲ್ಲಿ ಸಿಎಂ ಬಿಎಸ್ವೈ, ಪುತ್ರ ವಿಜಯೇಂದ್ರ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಸೇರಿದಂತೆ ಅನೇಕ ಬಿಜೆಪಿ ನಾಯಕರ ಭಾವಚಿತ್ರಗಳಿದ್ದು, ಎಲ್ಲವನ್ನೂ ಕೂಡಾ ಗೀಚಿ ವಿರೂಪಗೊಳಿಸಲಾಗಿದೆ.
''ರಾಜಕಾರಣಿಗಳನ್ನು ಹೊಡೆದು ಕೊಲ್ಲಬೇಕು, ದೇವ ಲೋಕದಿಂದ ಹೊರ ಹಾಕಲ್ಪಟ್ಟ ದ್ರೋಹಿ ದೂತರುಗಳು ಸೇಡಿನ ಸ್ವಭಾವ ಹೊಂದಿದ್ದು, ವಿಗ್ರಹಗಳ ಮೂಲಕ ಭೂ ಲೋಕದ ಜನರನ್ನು ಭ್ರಷ್ಟರನ್ನಾಗಿಸಿ, ನಕಲಿ ದೇವರಾಗಿ ಅನಾಧಿಕಾಲದಿಂದ ಮೆರೆಯಲ್ಪಡುತ್ತಿದೆ. ಎಚ್ಚರ, ರಕ್ಷ ಹೀರುವ ಸೊಳ್ಳೆಗಳಂತೆ ಜನರನ್ನು ದೋಚಿ ಬಾಚಿ ತಿಂದು ತೇಗುವ ಈ ಅಡಬೆ ರಾಜಕಾರಣಿಗಳನ್ನು ಅಟ್ಟಾಡಿಸಿ ಹಿಡಿದು ಕೊಲ್ಲಬೇಕಾಗಿದೆ. ಜನರು ಸಿದ್ದರಾಗಬೇಕು'' ಎಂದು ಫ್ಲೆಕ್ಸ್ನಲ್ಲಿ ಉದ್ರೇಕಕಾರಿಯಾಗಿ ಬರೆಯಲಾಗಿದೆ.
ಈ ಬಗ್ಗೆ ಕೊರಗಜ್ಜ ಸೇವಾ ಸಮಿತಿಯವರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿದ್ದಾರೆ.
ಇನ್ನು ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಕೊರಗಜ್ಜ, ಗುಳಿಗಜ್ಜನ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗಿದೆ. ಈ ವಿಕೃತಿ ಮೆರೆದ ಕಿಡಿಗೇಡಿಗಳ ವಿರುದ್ದ ಕ್ಷೇತ್ರದ ಕಾರಣೀಕ ಶಕ್ತಿಗಳಾದ ಗುಳಿಗಜ್ಜ ಮತ್ತು ಕೊರಗಜ್ಜ ಶಿಕ್ಷೆಸಬೇಕು ಎಂದು ಸಾಮೂಹಿಕವಾಗಿ ಪ್ರಾರ್ಥನೆ ಮಾಡಲಾಯಿತು.
ಇತ್ತೀಚೆಗೆ ಮಂಗಳೂರಿನ ಕೊಟ್ಟಾರದ ಬಬ್ಬುಸ್ವಾಮಿ ಹಾಗೂ ಅತ್ತಾವರದ ಬಾಬುಗುಡ್ಡೆಯ ಕೊರಗಜ್ಜನ ಕಟ್ಟೆಯ ಕಾಣಿಕೆ ಡಬ್ಬಿಯಲ್ಲಿ ಕೂಡಾ ಇದೇ ರೀತಿಯ ಅವಹೇಳನಕಾರಿ ಬರಹದ ಪತ್ರಗಳು ಪತ್ತೆಯಾಗಿತ್ತು.