ಬೆಂಗಳೂರು, ಜ.20 (DaijiworldNews/HR): "ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡಿರುವ ರಾಜ್ಯ ಸರ್ಕಾರ ಜನರ ಪ್ರತಿಭಟನೆ ಹಕ್ಕನ್ನು ಕಸಿಯುವ ಪ್ರಯತ್ನ ಮಾಡುತ್ತಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಾರಿಗೊಳಿಸಿರುವ ರೈತ ಮತ್ತು ಜನ ವಿರೋಧಿ ಮಸೂದೆಗಳ ವಿರುದ್ಧದ ರಾಜಭವನ ಚಲೋ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸುತ್ತಿರುವ ರೈತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಮಂಗಳವಾರ ರಾತ್ರಿಯಿಂದಲೇ ಪೊಲೀಸರು ಹೆದ್ದಾರಿಯಲ್ಲೇ ತಡೆಯುತ್ತಿದ್ದು, ಇದಕ್ಕೆ ಸಾತ್ ಕೊಟ್ಟು ರಾಜ್ಯ ಬಿಜೆಪಿ ಸರಕಾರ ದೌರ್ಜನ್ಯ ನಡೆಸುತ್ತಿದೆ" ಎಂದರು.
ಇನ್ನು "ನಮ್ಮ ಹೋರಾಟದ ಹಕ್ಕು ಕಸಿಯುವ ಅಧಿಕಾರ ಯಾರಿಗೂ ಇಲ್ಲ. ಹೀಗಾಗಿ ಪೊಲೀಸರು ತಡೆದ ಕಡೆಯೇ ರಸ್ತೆಯಲ್ಲಿ ಪ್ರತಿಭಟನೆ ಮಾಡಿ, ರಸ್ತೆ ಬಂದ್ ಮಾಡಿ" ಎಂದು ಕಾರ್ಯಕರ್ತರು ಹಾಗೂ ರೈತರಿಗೆ ಕರೆ ನೀಡಿದ್ದಾರೆ.