ಮುಂಬೈ, ಜ.20 (DaijiworldNews/MB) : ಮಹಾರಾಷ್ಟ್ರದಲ್ಲಿ ಜನವರಿ 15 ರಂದು ನಡೆದ ಗ್ರಾಮ ಪಂಚಾಯತಿ ಚುನಾವಣೆಯ ಫಲಿತಾಂಶಗಳನ್ನು ಸೋಮವಾರ ಪ್ರಕಟ ಮಾಡಲಾಗಿದೆ. ಈ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಬೆಂಬಲಿತ ಕಾರ್ಯಕರ್ತರು 13 ಜಿಲ್ಲೆಗಳ 70 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್, ಬಿಜೆಪಿಗರನ್ನು ಆಶ್ಚರ್ಯಚಕಿತರನ್ನಾಗಿಸಿದೆ.
ಜನವರಿ 15 ರಂದು 12,711 ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ ಸುಮಾರು 1.25 ಲಕ್ಷ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಕನಿಷ್ಠ 300 ಮಂದಿ ಎಎಪಿ ಕಾರ್ಯಕರ್ತರು ಕಣಕ್ಕೆ ಇಳಿದಿದ್ದು ಈ ಪೈಕಿ ನಾಗ್ಪುರ, ಸೋಲಾಪುರ, ಹಿಂಗೋಲಿ, ಲಾತೂರ್, ಯವತ್ಮಾಲ್, ಗೊಂಡಿಯಾ, ನಾಸಿಕ್, ಪಾಲ್ಘರ್, ಅಹ್ಮದ್ನಗರ, ಚಂದ್ರಪುರ, ಭಂಡಾರ, ಜಲ್ನಾ ಜಿಲ್ಲೆಗಳು ಸೇರಿದಂತೆ 13 ಜಿಲ್ಲೆಗಳ ಗ್ರಾಮ ಪಂಚಾಯಿತಿಗಳಲ್ಲಿ ಆಮ್ ಆದ್ಮಿ ಗೆಲುವು ಸಾಧಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ಎಎಪಿಯ ಈ ಗೆಲುವಿನ ಹಿಂದಿನ ಶಕ್ತಿ ಮಹಿಳಾ ಕಾರ್ಯಕರ್ತರು ಎಂದು ಹೇಳಿರುವ ಪಕ್ಷ ಜಯ ಗಳಿಸಿರುವ ಸ್ಥಾನಗಳ ಪೈಕಿ ಶೇ. 50ರಷ್ಟು ಮಹಿಳೆಯರು ಇದ್ದಾರೆ ಎಂದು ಹೇಳಿದೆ.