ಉಡುಪಿ, ಜ.19 (DaijiworldNews/PY): "ಮುಂದಿನ ಎರಡು ವರ್ಷದೊಳಗೆ ಹೆಜಮಾಡಿಯ ಸರ್ವಋತು ಬಂದರು ಪೂರ್ಣಗೊಳ್ಳಲಿದೆ" ಎಂದು ರಾಜ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಅವರು ಹೆಜಮಾಡಿ ಕೋಡಿಯಲ್ಲಿ ಮಂಗಳವಾರ 180.84 ಕೋಟಿ ರೂ.ವೆಚ್ಚದ ಸರ್ವಋತು ಮೀನುಗಾರಿಕಾ ಬಂದರು ಯೋಜನೆಯ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದರು.
"ಹೆಜಮಾಡಿ ಬಂದರು ನಿರ್ಮಾಣದಿಂದ ಮಲ್ಪೆಯ ದಟ್ಟಣಿ ಕಡಿಮೆ ಆಗಲಿದೆ. ಈ ಗಾಗಲೇ ಕೇಂದ್ರದ 13.8 ಕೋಟಿ ರೂ. ಹಣ ಮಂಜೂರಾತಿಆಗಿದ್ದು, ಯಾವೂದೇ ತೊಂದರೆ ಇಲ್ಲದೆ ಕಾಮಗಾರಿ ಸಾಗಲಿದೆ. ಎರಡು ವರ್ಷದ ಅವಧಿಯಲ್ಲಿ ಎಲ್ಲಾ ಕಾಮಗಾರಿ ಸಂಪೂರ್ಣಗೊಂಡು ಬಂದರು ಉದ್ಘಾಟನೆ ಕಾರಣಕ್ಕೂ ಕಾಮಗಾರಿ ನಿಲ್ಲದು. ಗುತ್ತಿಗೆದಾರರಿಗೆ ಸಮರ್ಪಕವಾಗಿ ಹಣ ಪಾವತಿ ಆಗಲಿದೆ. ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ರಾಜೀ ಮಾಡದೆ, ಕಾಮಗಾರಿ ಮುಂದುವರಿಯಲಿದೆ" ಎಂದರು.
"ರಾಜ್ಯದ ಅತ್ಯಂತ ಕಠಿಣ ಕೆಲಸವೆಂದರೆ ಮೀನುಗಾರಿಕಾ ವೃತ್ತಿ. ಈವರೆಗೆ ರಾಜ್ಯವು ದೇಶದ ಕರಾವಳಿ ಮೀನುಗಾರಿಕೆಯಲ್ಲಿ 4ನೇ ಸ್ಥಾನದಲ್ಲಿದೆ. ಒಳನಾಡು ಮೀನುಗಾರಿಕೆ ೯ನೇ ಸ್ಥಾನದಲ್ಲಿದೆ. ರಾಜ್ಯದ 320 ಕಿಮೀ ಉದ್ದದ ಕರಾವಳಿಯಲ್ಲಿ ಮೀನುಗಾರಿಕಗೆ ಉಪಯುಕ್ತವಾಗುವಂತಹ ಹಲವಾರು ಯೋಜನೆಗಳನ್ನು ಶೀಘ್ರ ಜಾರಿಗೆ ತರಲಾಗುವುದು. ದೇಶಕ್ಕೇ ಮಾದರಿಯಾಗಿ ಹೆಜಮಾಡಿ ಬಂದರನ್ನು ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಲಾಗುವುದು. ಇದರೊಂದಿಗೆ ಇನ್ನು ಕೆಲವೇ ವರ್ಷಗಳಲ್ಲಿ ಕರ್ನಾಟಕವು ಮೀನುಗಾರಿಕೆಯಲ್ಲಿ ಒಂದನೇ ಸ್ಥಾನಕ್ಕೇರಲಿದೆ" ಎಂದು ಬಂದರು ಮತ್ತು ಒಳನಾಡು ಜಲಸಾರಿಗೆ, ಮೀನುಗಾರಿಕೆ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
"23 ಸಾವಿರ ಮೀನುಗಾರ ಮಹಿಳೆಯರ ಸಾಲ ಮನ್ನಾ ಪ್ರಕ್ರಿಯೆ ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಮೇಕ್ ಇನ್ ಇಂಡಿಯಾ ಯೋಜನೆಯಡಿ ಮುಂದಿನ ಒಂದೂವರೆ ವರ್ಷದೊಳಗೆ ಎಲ್ಲಾ ಯಾಂತ್ರೀಕೃತ ದೋಣಿಗಳು ಭಾರತ ನಿರ್ಮಿತ ಇಂಜಿನ್ ಅಳವಡಿಸಲು ಸರಕಾರ ಪರಿಣಾಮಕಾರಿ ಕಾರ್ಯಕ್ರಮ ಹಮ್ಮಿಕೊಂಡಿದೆ" ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹೆಜಮಾಡಿ ಬಂದರು ಯೋಜನೆಯ ರೂವಾರಿ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಮಾತನಾಡಿ, "ಹೆಜಮಾಡಿ ಬಂದರು ಯೋಜನೆಯನ್ನು ಪ್ರಥಮ ಆದ್ಯತೆ ಮೇರೆಗೆ ಶೀಘ್ರವಾಗಿ ಜಾರಿಗೊಳಿಸಿದ ಮುಖ್ಯಮಂತ್ರಿಗಳಿಗೆ ಸಮಸ್ತ ಮೀನುಗಾರರ ಪರವಾಗಿ ಅಭಿನಂದನೆಗಳು. ರಾಜ್ಯ ಕರಾವಳಿಯ ಎಲ್ಲಾ ಬಂದರು ಪ್ರದೇಶಗಳನ್ನು ಅವಲೋಕಿಸಿದರೆ ಹೆಜಮಾಡಿಯಷ್ಟು ವಿಶಾಲ ಜಾಗ ಮತ್ತೆಲ್ಲೂ ಸಿಗದು. ಮುಂದೆ ಸರಕಾರಕ್ಕೆ ಬೇಕಾದಂತೆ ವಿಸ್ತರಿಸಲು ಬಹಳಷ್ಟು ಆಯಕಟ್ಟಿನ ಜಾಗವನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಬೃಹತ್ ಮೀನುಗಾರಿಕಾ ಬಂದರಾಗಿ ಪರಿವರ್ತಿಸಲು ಅವಕಾಶವಿದೆ. ಇದೀಗ ಬಂದರು ಯೋಜನೆ ಜಾರಿಗೊಂಡರೆ ಸಹಸ್ರಾರು ಕುಟುಂಬಗಳಿಗೆ ಪ್ರಯೋಜನವಾಗಲಿದೆ" ಎಂದರು.
ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಜಿಲ್ಲೆ "ಬಹುತೇಕ ಬಂದರುಗಳಲ್ಲಿ ಅಧಿಕ ಒತ್ತಡವಿದೆ. ಇವುಗಳನ್ನು ಸರಿದೂಗಿಸಲು ಹೆಜಮಾಡಿ ಬಂದರು ಯೋಜನೆ ಅವಶ್ಯವಾಗಿದ್ದು, ಕೇಂದ್ರ ಸರಕಾರದೊಂದಿಗೆ ನಿರಂತರ ಒತ್ತಡ ಹೇರಿ ಯೋಜನೆ ಜಾರಿಗೊಳಿಸಲಾಗಿದೆ. ಇದಕ್ಕೆ ತಕ್ಷಣ ಸ್ಪಂದಿಸಿದ ರಾಜ್ಯ ಮುಖ್ಯಮಂತ್ರಿ ಬಿಎಸ್ವೈ ಶೀಘ್ರ ಯೋಜನೆ ಜಾರಿಗೊಳಿಸಿದ್ದಾರೆ. ಮುಂದೆ ಕೇಂದ್ರ ಸರಕಾರದ ವಿವಿಧ ಯೋಜನೆಗಳಡಿ ಕಡಲ ತೀರ ಅಭಿವೃದ್ದಿಪಡಿಸಲಾಗುವುದು. ಉಡುಪಿ ಜಿಲ್ಲೆಯ ಅಭಿವೃದ್ಧಿಗೆ 2,500 ಕೋಟಿ ನೀಡಲು ಕೇಂದ್ರ ಸರಕಾರ ಭರವಸೆ ನೀಡಿದೆ ಎಂದರು. ಹಂಗಾರಕಟ್ಟೆ, ಕೋಡಿಕನ್ಯಾಣ, ಮಲ್ಪೆ ಬಂದರುಗಳನ್ನು ಸುಸಜ್ಜಿತಗೊಳಿಸುವಂತೆ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಹಾಗೂ ಮಹಿಳೆಯರಿಗೆ 50 ಸಾವಿರದವೆರೆಗೆ ನಿಬಡ್ಡಿ ಸಾಲ ನೀಡಬೇಕು. ಮಹಿಳಾ ಸಾಲಮನ್ನಾ ಯೋಜನೆಯ ಬಾಕಿ 12 ಕೋಟಿ ರೂ.ವನ್ನು ತಕ್ಷಣ ಬಿಡುಗಡೆ ಮಾಡಬೇಕು" ಎಂದು ವಿನಂತಿಸಿದರು.
ಇದೇ ಸಂದರ್ಭ ಮತ್ಸ್ಯಾಶ್ರಯ ಯೋಜನೆ, ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಮತ್ತು ಮೀನುಗಾರಿಕೆ ಸಂದರ್ಭ ಮೃತಪಟ್ಟವರ ಕುಟುಂಬದವರಿಗೆ ಚೆಕ್ಗಳನ್ನು ಮುಖ್ಯಮಂತ್ರಿ ವಿತರಿಸಿದರು.
ಇದೇ ಸಂದರ್ಭ ಮೊಗವೀರ ಸಮಾಜದ ಕೇಂದ್ರ ಸ್ಥಾನವಾದ ದ.ಕ ಮೊಗವೀರ ಮಹಾಜನ ಸಂಘ ಮತ್ತು ಹೆಜಮಾಡಿ ಬಂದರು ಅಭಿವೃದ್ಧಿ ಸಮಿತಿಯ ವತಿಯಿಂದ ಮುಖ್ಯಮಂತ್ರಿ ಬಿಎಸ್ವೈಯವರನ್ನು ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಸನ್ಮಾನಿಸಿದರು.
ಮೊಗವೀರ ಮುಂದಾಳು ಹಾಗೂ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಸಂಸ್ಥಾಪಕ ನಾಡೋಜ ಜಿ.ಶಂಕರ್, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಜೀವರಾಜ್, ಶಾಸಕರುಗಳಾದ ಕೆ. ರಘುಪತಿ ಭಟ್ ಉಡುಪಿ ಮತ್ತು ಉಮಾನಾಥ ಕೋಟ್ಯಾನ್ ಮೂಲ್ಕಿ ಮೂಡುಬಿದಿರೆ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಉಡುಪಿ ಜಿಪಂ ಅಧ್ಯಕ್ಷ ದಿನಕರ್ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿಯ ಅಧ್ಯಕ್ಷ ಸುಮಿತ್ ಶೆಟ್ಟಿ ಕೆ., ಸದಸ್ಯ ಶಶಿಕಾಂತ್ ಪಡುಬಿದ್ರಿ,ಕಾಪು ತಾಪಂ ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ, ಸದಸ್ಯೆ ರೇಣುಕಾ ಆರ್.ಪುತ್ರನ್, ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮೀನುಗಾರರ ಮುಂದಾಳು ಆನಂದ ಸಿ.ಕುಂದರ್, ಹೆಜಮಾಡಿ ಬಂದರು ಹೋರಾಟ ಸಮಿತಿಯ ಅಧ್ಯಕ್ಷ ಸದಾಶಿವ ಕೋಟ್ಯಾನ್, ದ.ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಉಡುಪಿ ಜಿಲ್ಲಾಕಾರಿ ಜಿ.ಜಗದೀಶ್, ಎಡಿಸಿ ಸದಾಶಿವ ಪ್ರಭು, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಕಾರಿ ಡಾ. ನವೀನ್ ಭಟ್, ಮೀನುಗಾರಿಕಾ ನಿರ್ದೇಶಕ ರಾಮಾಚಾರ್ಯ, ಜಿಲ್ಲಾ ಪೋಲಿಸ್ ಎಸ್ಪಿ ಎನ್.ವಿಷ್ಣುವರ್ಧನ್ ಮುಖ್ಯ ಅತಿಥಿಗಳಾಗಿದ್ದರು.