ಬೆಂಗಳೂರು, ಜ.19 (DaijiworldNews/MB) : ''ವ್ಯಾಕ್ಸಿನ್ ತೆಗೆದುಕೊಳ್ಳಲು ಹಿಂಜರಿಕೆ ಇದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು'' ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.
ದೇಶದಲ್ಲಿ ಲಸಿಕೆ ಅಭಿಯಾನ ಆರಂಭವಾದ ಬಳಿಕ 580 ಮಂದಿಯಲ್ಲಿ ವ್ಯತಿರಿಕ್ತ ಪರಿಣಾಮಗಳು ಕಂಡು ಬಂದಿದೆ. ಉತ್ತರ ಪ್ರದೇಶದ ಮೊರಾಬಾದ್ನಲ್ಲಿ ಮತ್ತು ಕರ್ನಾಟಕದ ಬಳ್ಳಾರಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಆದರೆ ಅವರ ಸಾವಿಗೆ ಲಸಿಕೆ ಕಾರಣವಲ್ಲ. ಲಸಿಕೆ ಪಡೆದು ಗಂಭೀರವಾದ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ''ಕೊರೊನಾ ಲಸಿಕೆ ಸುರಕ್ಷಿತವಾಗಿದ್ದು, ನಾರಾಯಣ ಹೃದಯಾಲದ ಮುಖ್ಯಸ್ಥ ಡಾ. ದೇವಿ ಶೆಟ್ಟಿ ಸೇರಿದಂತೆ ಅನೇಕರು ಲಸಿಕೆ ಪಡೆದಿದ್ದಾರೆ. ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಎಲ್ಲ ರೀತಿ ಪರೀಕ್ಷೆ ಮಾಡಿಯೇ ಅನುಮತಿ ಕೊಟ್ಟಿದೆ'' ಎಂದು ಸುಧಾಕರ್ ಸುದ್ದಿಗಾರರಿಗೆ ತಿಳಿಸಿದ್ದರು. ಬಳಿಕ ಕೊರೊನಾ ಲಸಿಕೆ ಪಡೆಯಲು ಜನರು ಹಿಂಜರಿಯುತ್ತಿದ್ದಾರೆ ಎಂಬ ಸುದ್ದಿಯೂ ಕೇಳಿ ಬಂದಿದೆ.
ಈ ಎಲ್ಲಾ ಗೊಂದಲಕಾರಿ ಸುದ್ದಿಗಳ ಹಿನ್ನೆಲೆ ಟ್ವೀಟ್ ಮಾಡಿರುವ ಸುಧಾಕರ್, ''ವ್ಯಾಕ್ಸಿನ್ ತೆಗೆದುಕೊಳ್ಳಲು ಹಿಂಜರಿಕೆ ಇದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಇಡೀ ದೇಶದಲ್ಲಿ ನಿನ್ನೆ ಅತಿ ಹೆಚ್ಚು ಜನರು ನಮ್ಮ ರಾಜ್ಯದಲ್ಲಿ ಲಸಿಕೆ ಪಡೆದಿದ್ದಾರೆ. ಲಸಿಕೆಗಳು ಸುರಕ್ಷಿತವಾಗಿದ್ದು ರಾಜ್ಯದಲ್ಲಿ ಲಸಿಕೆ ಪ್ರಯೋಗ ಯಶಸ್ವಿಯಾಗಿ ನಡೆದಿದೆ. ವದಂತಿಗಳನ್ನು ನಂಬಬೇಡಿ. ಲಸಿಕೆ ಕುರಿತು ಯಾವುದೇ ಭಯ ಬೇಡ'' ಎಂದು ಹೇಳಿದ್ದಾರೆ.