ನವದೆಹಲಿ, ಜ.19 (DaijiworldNews/PY): ಆಸೀಸ್ ನೆಲದಲ್ಲಿ ಟೆಸ್ಟ್ ಕ್ರಿಕೆಟ್ ಸರಣಿಯನ್ನು ಗೆದ್ದ ಟೀಂ ಇಂಡಿಯಾದ ಸಾಧನೆಯನ್ನು ದೇಶದ ಪ್ರಮುಖರು ಹಾಡಿ ಹೊಗಳಿದ್ದಾರೆ.
file photo
ಈ ಬಗ್ಗೆ ಟ್ವೀಟ್ ಮಾಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು, "ಆಸ್ಟ್ರೇಲಿಯಾದಲ್ಲಿ ಇದು ಐತಿಹಾಸಿಕ ಕ್ರಿಕೆಟ್ನ ವಿಜಯವಾಗಿದೆ. ಕಠಿಣವಾದ ಟೆಸ್ಟ್ ಕ್ರಿಕೆಟ್ ಸರಣಿಯನ್ನು ಗೆದ್ದ ಭಾರತದ ಪ್ರತಿಭಾವಂತ ಯುವ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ತಂಡ ಅಸಾಧಾರಣವಾದ ಕೌಶಲವನ್ನು ಪ್ರದರ್ಶಿಸಿದೆ. ಇವರ ಸಾಧನೆಯ ಬಗ್ಗೆ ರಾಷ್ಟ್ರ ಹೆಮ್ಮೆಪಡುತ್ತದೆ" ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದು, "ಆಸ್ಟ್ರೇಲಿಯಾದಲ್ಲಿ ಭಾರತದ ಕ್ರಿಕೆಟ್ ತಂಡ ಯಶಸ್ಸು ಸಾಧಿಸಿದ್ದು, ಇದರಿಂದ ನಾವೆಲ್ಲರೂ ಸಂತಸಗೊಂಡಿದ್ದೇವೆ. ಅವರ ಗಮನಾರ್ಹ ಶಕ್ತಿ ಹಾಗೂ ಉತ್ಸಾಹವು ಸರಣಿಯುದ್ದಕ್ಕೂ ಗೋಚರಿಸಿದೆ. ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು" ಎಂದು ತಿಳಿಸಿದ್ದಾರೆ.
"ಐತಿಹಾಸಿಕ ಸರಣಿ ಗೆದ್ದ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ನಿಮ್ಮ ಸಾಧನೆಗೆ ಇಡೀ ರಾಷ್ಟ್ರ ಹೆಮ್ಮೆಪಡುತ್ತದೆ. ಭಾರತ ಉತ್ತಮವಾಗಿ ಆಡಿದೆ" ಎಂದು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಟ್ವೀಟ್ ಮೂಲಕ ಅಭಿನಂದನೆ ತಿಳಿಸಿದ್ದು, "ಬ್ರಿಸ್ಬೇಲ್ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ಟೀಂ ಇಂಡಿಯಾಗೆ ಅಭಿನಂದನೆಗಳು" ಎಂದು ತಿಳಿಸಿದ್ದಾರೆ.
ಎರಡನೇ ಇನ್ನಿಂಗ್ಸ್ನಲ್ಲಿ 96 ಓವರ್ಗೆ 7 ವಿಕೆಟ್ ನಷ್ಟಕ್ಕೆ 329 ರನ್ ಕಲೆಹಾಕುವ ಮೂಲಕ ಟೀಮ್ ಇಂಡಿಯಾ ಗೆಲುವಿನ ನಗೆ ಬೀರಿದೆ. ಈ ಮುಖೇನ ಟೀಂ ಇಂಡಿಯಾ ಬ್ರಿಸ್ಬೇನ್ ಟೆಸ್ಟ್ ಇತಿಹಾಸಲ್ಲೇ ಅತಿ ಹೆಚ್ಚು ರನ್ (257) ಬೆನ್ನತ್ತಿದ್ದ ಕೀರ್ತಿಗೆ ಪಾತ್ರವಾಗಿದೆ.