ಬೆಂಗಳೂರು, ಜ.19 (DaijiworldNews/MB) : ಈ ಹಿಂದೆ ಚೀನಾದ ದಾಳಿಗೆ ಪ್ರತಿ ದಾಳಿಯಾಗಿ ಚೀನಾ ಆಪ್ಗಳನ್ನು ಬ್ಯಾನ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಚೀನಾ ನಮ್ಮ ಗಡಿಯೊಳಗೆ ಹಳ್ಳಿ ನಿರ್ಮಿಸಿರುವ ಈ ಸಂದರ್ಭದಲ್ಲಿ ಮತ್ತೆಷ್ಟು ಆಪ್ಗಳನ್ನು ಬ್ಯಾನ್ ಮಾಡುವರು ಬಿಜೆಪಿಗರೇ ಎಂದು ಕಾಂಗ್ರೆಸ್ ಪಕ್ಷವು ಬಿಜೆಪಿಗರ ಕಾಲೆಳೆದಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಹಳ್ಳಿಯೊಂದನ್ನೂ ನಿರ್ಮಿಸಿ ಭಾರತದ ಭೂಪ್ರದೇಶ ಅತಿಕ್ರಮಿಸಿದೆ ಎಂಬ ಸುದ್ದಿಗಳು ಆಗುತ್ತಿರುವ ನಡುವೆ, ''ದೊಡ್ಡ ದೊಡ್ಡ ಭಾಷಣ ಮಾಡುವ ಪ್ರಧಾನಿಯವರಿಗೆ ಚೀನಾದ ಹುನ್ನಾರ ಯಾಕೆ ಗೊತ್ತಾಗಲಿಲ್ಲ?'' ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದ್ದರು.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಕೂಡಾ ಈ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದು, ''ಭಾರತವನ್ನು ಯಾವ ದೇಶದ ಎದುರೂ ತಲೆಬಾಗಿ ನಿಲ್ಲಲು ಅವಕಾಶ ನೀಡುವುದಿಲ್ಲ'' ಎಂಬ ಮೋದಿಯವರ ಮಾತನ್ನು ಉಲ್ಲೇಖಿಸಿದ್ದರು.
ಇದೀಗ ಈ ವಿಚಾರದಲ್ಲೇ ಟ್ವೀಟ್ ಮಾಡಿರುವ ಕಾಂಗ್ರೆಸ್, ''ಚೀನಾ ನಮ್ಮ 20 ಯೋಧರನ್ನು ಕೊಂದಾಗ, ಭಾರತದಲ್ಲಿ ಚೀನಾದ 59 ಆಪ್ಗಳನ್ನು ಬ್ಯಾನ್ ಮಾಡಲಾಯಿತು. ಚೀನಾವು ಲಡಾಖ್ ಅತಿಕ್ರಮಿಸಿದಾಗ ಭಾರತದಲ್ಲಿ 47 ಚೀನಾದ ಆಪ್ಗಳನ್ನು ಬ್ಯಾನ್ ಮಾಡಲಾಯಿತು. ಈಗ ನಮ್ಮ ಗಡಿಯೊಳಗೆ ಹಳ್ಳಿ ನಿರ್ಮಿಸಿದೆ. ನರೇಂದ್ರ ಮೋದಿ ಅವರು ಈಗ ಮತ್ತೆಷ್ಟು ಆಪ್ಗಳನ್ನು ಬ್ಯಾನ್ ಮಾಡುವರು ಬಿಜೆಪಿಗರೇ'' ಎಂದು ಪ್ರಶ್ನಿಸಿದ್ದು, ''ಚೀನಾ ಹೆಸರನ್ನೇ ಹೇಳದ 56 ಇಂಚಿನ ಎದೆ ಗಡಿ ರಕ್ಷಣೆಗೆ ದಿಟ್ಟ ಕ್ರಮ ಕೈಗೊಳ್ಳುವುದೇ ಅನುಮಾನ'' ಎಂದು ಟೀಕಿಸಿದೆ.