ನವದೆಹಲಿ, ಜ.19 (DaijiworldNews/MB) : ಗಂಡು ಮಗುನನ್ನು ಹೆರಲಿಲ್ಲ ಎಂಬ ಕಾರಣಕ್ಕೆ ವಿವಾಹವಾದ 23 ವರ್ಷಗಳ ಬಳಿಕ ತನ್ನ ಪತಿ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೆಹಲಿಯ ಸಾಕೆತ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ನವದೆಹಲಿ ಮೂಲದ ಕೈಗಾರಿಕಾ ಸಂಸ್ಥೆಯ ನಿರ್ದೇಶಕರಾದ ಡ್ಯಾನಿಶ್ ಹಾಶಿಮ್ ಮತ್ತು ಹುಮಾ ಹಾಶಿಮ್ ಎಂಬ ಮಹಿಳೆಯು 23 ವರ್ಷಗಳ ಹಿಂದೆ ವಿವಾಹವಾಗಿದ್ದು ಅವರಿಗೆ 20 ಮತ್ತು 18 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಆದರೆ ಈಗ 23 ವರ್ಷಗಳ ಬಳಿಕ ತಾನು ಗಂಡು ಮಗುವನ್ನು ಹೆತ್ತಿಲ್ಲ ಎಂದು ಪತಿ ಡ್ಯಾನಿಶ್ ಹಾಶಿಮ್ 'ತ್ರಿವಳಿ ತಲಾಖ್' ಉಚ್ಛಾರ ಮಾಡಿದ್ದಾರೆ ಎಂದು ಮಹಿಳೆಯು ದೂರಿನಲ್ಲಿ ತಿಳಿಸಿದ್ದಾರೆ.
ಗಂಡು ಮಗು ಬೇಕು ಎಂಬ ಕಾರಣಕ್ಕಾಗಿ ಹಲವಾರು ಬಾರಿ ತನ್ನನ್ನು ಗರ್ಭಪಾತ ಮಾಡಲು ಒತ್ತಡ ಹೇಳಿದ್ದರು. ಒಂದು ದಿನ ನನ್ನ ಮಗಳಿಗೆ ಅವರು ಹೊಡೆಯುತ್ತಿದ್ದು ಆ ಸಂದರ್ಭ ನಾನು ತಡೆದಾಗ ನನ್ನನ್ನು ದೂಡಿ ತ್ರಿವಳಿ ತಲಾಖ್ ನೀಡಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ.
ನಾವು ಈ ಬಗ್ಗೆ ದೂರು ನೀಡುವ ಯತ್ನ ಮಾಡಿದ್ದೇವೆ. ಆದರೆ ಪೊಲೀಸರು ಈ ಬಗ್ಗೆ ಗಮನ ಹರಿಸಿಲ್ಲ. ಪೊಲೀಸರು ಎಫ್ಐಆರ್ ದಾಖಲಿಸಿಲ್ಲ. ಡ್ಯಾನಿಶ್ಗೆ ಉತ್ತಮ ರಾಜಕೀಯ ಸಂಪರ್ಕ ಇರುವ ಕಾರಣ ಪೊಲೀಸರು ಪ್ರಕರಣ ದಾಖಲಿಸಿಲ್ಲ. ಡ್ಯಾನಿಶ್ ಹಾಶಿಮ್ ನಮಗೆ ಜೀವನಾಂಶವನ್ನೂ ನೀಡಿಲ್ಲ. ನನಗೆ ಬೆದರಿಕೆಯನ್ನು ಹಾಕಲಾಗುತ್ತಿದೆ ಎಂದು ಹುಮಾ ದೂರಿದ್ದಾರೆ. ಮಹಿಳೆಯು ತನ್ನ ಹೆಣ್ಣುಮಕ್ಕಳೊಂದಿಗೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ.
ಜುಲೈ 2019 ರಲ್ಲಿ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ಸಂರಕ್ಷಣೆ) ಕಾಯ್ದೆ 2019 ಅನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗಿದ್ದು ಮುಸ್ಲಿಮರಲ್ಲಿ 'ತ್ರಿವಳಿ ತಲಾಖ್' ಅನ್ನು ಉಚ್ಚರಿಸಿ ವಿಚ್ಛೇದನ ನೀಡುವುದು ಶಿಕ್ಷಾರ್ಹ ಅಪರಾಧವಾಗಿದೆ.