ಬೆಂಗಳೂರು, ಜ.19 (DaijiworldNews/PY): "ನನಗೆ ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶವಿಲ್ಲ. ಅಲ್ಲದೇ ಖಾತೆಯಲ್ಲಿ ಯಾವುದೇ ರೀತಿಯಾದ ಬದಲಾವಣೆ ಇಲ್ಲ" ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.
ನೂತನ ಕೈಗಾರಿಕಾ ನೀತಿಯ ಬಿಡುಗಡೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯ ವಿಚಾರವಾಗಿ ಪಕ್ಷದ ಪ್ರಮುಖ ನಾಯಕರ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿಲ್ಲ. ಈ ವಿಚಾರದ ಬಗ್ಗೆ ಚುನಾವಣೆ ಘೋಷಣೆ ನಂತರ ಚರ್ಚೆಯಾಗಲಿದೆ" ಎಂದು ಹೇಳಿದರು.
"ಪಕ್ಷದಲ್ಲಿ ಯಾರೂ ಕೂಡಾ ನನಗೆ ಬೆಳಗಾವಿಯಿಂದ ಕಣಕ್ಕಿಳಿಯುವ ವಿಚಾರದ ಬಗ್ಗೆ ಸೂಚನೆ ನೀಡಿಲ್ಲ. ನಾನೂ ಈ ಬಗ್ಗೆ ಇಚ್ಛಿಸಿಲ್ಲ. ನೀವೆ ಈ ರೀತಿ ಸೃಷ್ಟಿ ಮಾಡಿ ನಂತರ ಪ್ರಶ್ನಿಸುತ್ತಿದ್ದೀರಿ" ಎಂದು ಕೇಳಿದರು.
ಖಾತೆ ಬದಲಾವಣೆಯಾಗಬಹುದೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ಸಿಎಂ ಅವರೊಂದಿಗೆ ಸೇರಿ ಈ ವಿಚಾರದ ಬಗ್ಗೆ ಯಾರೂ ಚರ್ಚಿಸಿಲ್ಲ. ಈ ಬಗ್ಗೆ ಸಿಎಂ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಎಲ್ಲೂ ಚರ್ಚೆಯಾಗಿಲ್ಲ. ಇದು ಮಾಧ್ಯಮದವರ ಸೃಷ್ಟಿ" ಎಂದರು.