ನವದೆಹಲಿ, ಜ.19 (DaijiworldNews/HR): ಅರುಣಾಚಲ ಪ್ರದೇಶದಲ್ಲಿ ಚೀನಾ ಹಳ್ಳಿಯೊಂದನ್ನು ನಿರ್ಮಾಣ ಮಾಡಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತಿರುಗೇಟು ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, " ರಾಹುಲ್ ಗಾಂಧಿ ಅವರ ರಾಜವಂಶ ಮತ್ತು ಕಾಂಗ್ರೆಸ್ ಚೀನಾ ವಿಚಾರವಾಗಿ ಸುಳ್ಳು ಹೇಳುವುದನ್ನು ಯಾವಾಗ ನಿಲ್ಲಿಸುತ್ತದೆ? ಅವರು ಉಲ್ಲೇಖಿಸುತ್ತಿರುವ ಅರುಣಾಚಲ ಪ್ರದೇಶದಲ್ಲಿ ಸೇರಿದಂತೆ ಸಾವಿರಾರು ಕಿ.ಮೀ ದೂರದ ಪ್ರದೇಶವನ್ನು ಚೀನಿಯರಿಗೆ ಪಂಡಿತ್ ನೆಹರೂ ಹೊರತುಪಡಿಸಿ ಬೇರೆ ಯಾರೂ ಉಡುಗೊರೆಯಾಗಿ ನೀಡಿಲ್ಲ. ಪದೇ ಪದೆ, ಕಾಂಗ್ರೆಸ್ ಏಕೆ ಚೀನಾಗೆ ಶರಣಾಗುತ್ತದೆ"? ಎಂದು ಪ್ರಶ್ನಿಸಿದ್ದಾರೆ.
ಇನ್ನು "ರಾಹುಲ್ ರೈತರನ್ನು ಪ್ರಚೋದಿಸುತ್ತಿದ್ದಾರೆ ಮತ್ತು ದಾರಿತಪ್ಪಿಸುತ್ತಿದ್ದಾರೆ ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಸ್ವಾಮಿನಾಥನ್ ಆಯೋಗದ ವರದಿಯನ್ನು ವರ್ಷಗಳಿಂದ ಏಕೆ ನಿಲ್ಲಿಸಿತ್ತು ಮತ್ತು ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್ಪಿ) ಯಾಕೆ ಹೆಚ್ಚಿಸಲಿಲ್ಲ? ಎಂದು ಪ್ರಶ್ನಿಸಿದರು.
"ಕೇಂದ್ರದ ವಿರುದ್ಧ ಕೃಷಿ ಕಾಯ್ದೆಯ ಕುರಿತು ವಿರೋಧಿಸುತ್ತಿರುವ ಕಾಂಗ್ರೆಸ್ ಸರ್ಕಾರಗಳ ಅಡಿಯಲ್ಲಿ ದಶಕಗಳಿಂದಲೂ ರೈತರು ಏಕೆ ಬಡವರಾಗಿಯೇ ಉಳಿದಿದ್ದರು" ಎಂದು ರಾಹುಲ್ ಅವರನ್ನು ಪ್ರಶ್ನಿಸಿದ್ದಾರೆ.