ಮೈಸೂರು, ಜ.19 (DaijiworldNews/PY): "ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಮೈಸೂರಿಗೆ ಬಂದು ಪಕ್ಷದಿಂದ ಹೊರಗೆಹಾಕಲಿ. ಆಮೇಲೆ ಏನು ಮಾಡಬೇಕು ಎಂದು ಮಾಡಿದರೆ ಆಯಿತು" ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, "ಮೈಸೂರಿಗೆ ಬಂದು ಪಕ್ಷದಿಂದ ಹೊರಗೆ ಹಾಕುತ್ತೇನೆ ಎಂದು ಕುಮಾರಸ್ವಾಮಿ ಅವರು ಖುದ್ದಾಗಿ ಹೇಳಿದ್ದಾರೆ. ಈ ಹಿನ್ನೆಲೆ ಎಲ್ಲವೂ ಮುಗಿಯಿತು ಎಂದು ಅರ್ಥ ಅಲ್ಲವೇ?. ಈಗ ಸಂಘಟಕರ ಪಟ್ಟಿಯ ವಿಚಾರದ ಬಗ್ಗೆ ಹೇಳಲು ಏನು ಉಳಿದಿದೆ?" ಎಂದು ಕೇಳಿದರು.
"ನಾನು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭ ಏನೂ ನಡೆದಿಲ್ಲ. ಈಗ ನಾನು ಕೇವಲ ಶಾಸಕನಾಗಿದ್ದು, ನನ್ನ ಮಾತನ್ನು ಯಾರು ಕೇಳುತ್ತಾರೆ?. ಮೈಸೂರು ಹೈಕಮಾಂಡ್ ಹೇಳಿದಂತೆ ಎಲ್ಲವನ್ನೂ ಕೈಗೊಂಡಿದ್ದಾರೆ" ಎಂದು ಸಾ.ರಾ.ಮಹೇಶ್ ಅವರಿಗೆ ಟಾಂಗ್ ನೀಡಿದರು.
"ನನ್ನನ್ನು ಸಾ.ರಾ.ಮಹೇಶ್ ಅವರು ಜಲದರ್ಶಿನಿ ಅತಿಥಿ ಗೃಹದಲ್ಲಿ ಭೇಟಿ ಮಾಡಿದ್ದು, ಜಿ.ಟಿ.ದೇವೇಗೌಡರ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದಿದ್ದರು. ಆದರೆ, ಚುನಾವಣೆ ಸಂಬಂಧ ಮೇಯರ್ ಸಭೆ ನಡೆಸಿದ ಸಂದರ್ಭ ನನಗೆ ಒಂದು ಮಾತು ಹೇಳಿಲ್ಲ" ಎಂದರು.
"ಮೊದಲಿನಿಂದಲೂ ಕೂಡಾ ನನ್ನನ್ನು ಜೆಡಿಎಸ್ನಿಂದ ದೂರ ಮಾಡಬೇಕು ಎನ್ನುವ ಪಿತೂರಿ ನಡೆಯುತ್ತಿದೆ. ಇನ್ನೆರಡು ವರ್ಷ ಶಾಸಕನಾಗಿರುತ್ತೇನೆ. ನಂತರ ಚುನಾವಣೆಯಲ್ಲಿ ಸ್ಪರ್ಧಿಸಬೇಕೋ ಅಥವಾ ಬೇಡವೋ ಎನ್ನುವುದರ ಬಗ್ಗೆ ನಿರ್ಧಾರ ಮಾಡುತ್ತೇನೆ" ಎಂದು ಹೇಳಿದರು.