ಇಂಫಾಲ್, ಜ.19 (DaijiworldNews/MB) : ತಮ್ಮ ಆನ್ಲೈನ್ ನ್ಯೂಸ್ ಪೋರ್ಟಲ್ನಲ್ಲಿ "ಕ್ರಾಂತಿಕಾರಿ ಸಿದ್ಧಾಂತವನ್ನು ಬೆಂಬಲಿಸುವ" ಲೇಖನವೊಂದನ್ನು ಪ್ರಕಟಿಸಿದ ನಂತರ ಇಬ್ಬರು ಮಣಿಪುರ ಸಂಪಾದಕರನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಿದ ಒಂದು ದಿನದ ನಂತರ, ಪೊಲೀಸರು ಸೋಮವಾರ ಇಬ್ಬರನ್ನು ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಮತ್ತು ಸೆಕ್ಷನ್ 124 ಎ (ದೇಶದ್ರೋಹ) ಅಡಿಯಲ್ಲಿ ದಿ ಫ್ರಾಂಟಿಯರ್ ಮಣಿಪುರದ ಕಾರ್ಯನಿರ್ವಾಹಕ ಸಂಪಾದಕ ಪಾವೋಜೆಲ್ ಚೌಬಾ ಮತ್ತು ಆನ್ಲೈನ್ ನ್ಯೂಸ್ ಪೋರ್ಟಲ್ನ ಪ್ರಧಾನ ಸಂಪಾದಕ ಧೀರನ್ ಸದೋಕ್ಪಮ್ ಅವರನ್ನು ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 8 ರಂದು ಮಣಿಪುರದ "ಕ್ರಾಂತಿಕಾರಿ ಗುಂಪುಗಳು" ತಮ್ಮ ಮೂಲದಿಂದ ದೂರ ಸರಿಯುವುದನ್ನು ಟೀಕಿಸಿ ಎಂ. ಜಾಯ್ ಲುವಾಂಗ್ ಅವರು ಬರೆದ "ಗೊಂದಲದಲ್ಲಿ ಕ್ರಾಂತಿಕಾರಿ ಪ್ರಯಾಣ" ಎಂಬ ಲೇಖನವನ್ನು ಪ್ರಕಟಿಸಿದ ನಂತರ ಈ ಪೋರ್ಟ್ಲ್ ಸಂಪಾದಕರ ಮೇಲೆ ಪ್ರಕರಣ ದಾಖಲಾಗಿತ್ತು.
ಬರಹವನ್ನು ಪ್ರಕಟಣೆ ಮಾಡಿದ ಬಗ್ಗೆ ತನಿಖೆಯ ಭಾಗವಾಗಿ ಇಬ್ಬರು ಸಂಪಾದಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.
"ಲೇಖಕರ ಮೂಲವನ್ನು ಪರಿಶೀಲಿಸದೆ, ಮೇಲ್ವಿಚಾರಣೆ ಮಾಡದೆ ಪ್ರಕಟನೆ ಮಾಡಲಾಗಿದೆ. ಇನ್ನು ಇಂತಹ ಅಪರಾಧ ಮರುಕಳಿಸುವುದಿಲ್ಲ ಎಂದು ಇಬ್ಬರು ಸಂಪಾದಕರು ತಪ್ಪೊಪ್ಪಿಕೊಂಡ ಬಳಿಕ ಅವರಿಬ್ಬರನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
"ಈ ಬರಹವು ಬಹಿರಂಗವಾಗಿ ಕ್ರಾಂತಿಕಾರಿ ಸಿದ್ಧಾಂತಗಳು ಮತ್ತು ಚಟುವಟಿಕೆಗಳನ್ನು ಅನುಮೋದಿಸಿದೆ. ಕಳೆದ ಹಲವು ವರ್ಷಗಳಿಂದ ಮಣಿಪುರದ ಸಶಸ್ತ್ರ ಕ್ರಾಂತಿಕಾರಿಗಳ ಹದಗೆಡುತ್ತಿರುವ ಸ್ವಭಾವದ ಬಗ್ಗೆ ಬೇಸರ ವ್ಯಕ್ತಪಡಿಸಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಇಬ್ಬರು ಸಂಪಾದಕರನ್ನು ಬಿಡುಗಡೆ ಮಾಡುವಂತೆ ಮಣಿಪುರದ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಣಿಪುರದ ಸಂಪಾದಕರ ನಿಯೋಗವು ಸೋಮವಾರ ಮುಖ್ಯಮಂತ್ರಿ ಎನ್. ಬಿರೆನ್ ಸಿಂಗ್ ಅವರನ್ನು ಭೇಟಿಯಾಗಿ ಇಬ್ಬರು ಸಂಪಾದಕರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿತ್ತು.