ಮೈಸೂರು, ಜ.19 (DaijiworldNews/PY): "ರೈತರ ಆತ್ಮಹತ್ಯೆಗೆ ಅವರ ವೀಕ್ಮೈಂಡ್ ಕಾರಣ" ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎನ್ನುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ರೈತರು ಆತ್ಮಹತ್ಯೆ ಮಾಡಿಕೊಂಡ ತಕ್ಷಣ ಅವರ ಮನೆಗೆ ಹೋಗಿ ಹಾರ ಹಾಕಿ ಅವರ ಮನೆಯವರಿಗೆ ಸಾಂತ್ವಾನ ಹೇಳಿದರೆ ಆತ್ಮಹತ್ಯೆ ನಿಲ್ಲುವುದಿಲ್ಲ. ಪರ್ಯಾಯವಾಗಿ ಕಾರ್ಯಕ್ರಮಗಳನ್ನು ಮಾಡಬೇಕು" ಎಂದಿದ್ದಾರೆ.
"ಸರ್ಕಾರದ ನೀತಿಗಳು ರೈತರ ಆತ್ಮಹತ್ಯೆಗೆ ಕಾರಣವಲ್ಲ. ವೀಕ್ ಮೈಂಡ್ ಕಾರಣದಿಂದ ಕೆಲವು ರೈತರು ಆತ್ಮಹತ್ಯೆಗೆ ಶರಣಾಗುತ್ತಾರೆ. ರೈತರು ಮಾತ್ರ ಅಲ್ಲ, ಉದ್ಯಮಿಗಳು, ಅಧಿಕಾರಿಗಳು ಹಾಗೂ ಇತರೆ ಕ್ಷೇತ್ರದ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ" ಎಂದು ತಿಳಿಸಿದ್ದಾರೆ.
"ಸರ್ಕಾರಗಳನ್ನು ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ. ಹಳ್ಳಿಗಳಲ್ಲಿ ಹೆಚ್ಚಿನ ಮಂದಿ ರೈತರೇ ಆಗಿರುತ್ತಾರೆ. ಹಾಗೆಂದು ಹಳ್ಳಿಗಳಲ್ಲಿ ಆಗುವ ಎಲ್ಲಾ ಸಾವುಗಳು ರೈತರ ಆತ್ಮಹತ್ಯೆ ಎಂದುಕೊಳ್ಳುವುದಕ್ಕೆ ಆಗುತ್ತಾ?. ಸಮಸ್ಯೆಗೆ ಕಾರಣ ಹುಡುಕುವುದೇ ತಜ್ಞರ ಸಮಿತಿಗಳ ಕಾರ್ಯ. ಅವರು ನೀಡುವ ವರದಿಯ ಪ್ರಕಾರ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ" ಎಂದಿದ್ದಾರೆ.