ಹುಬ್ಬಳ್ಳಿ, ಜ.19 (DaijiworldNews/HR): ಕೊರೊನಾ ಲಸಿಕೆ ನೀಡುವಲ್ಲಿ ಕರ್ನಾಟಕ ದೇಶದಲ್ಲೇ ಮುಂದಿದ್ದು, ಎಲ್ಲ ರೀತಿಯ ಸಂಶೋಧನೆ, ಪರೀಕ್ಷೆಯ ನಂತರವೇ ಲಸಿಕೆಯನ್ನು ಬಳಕೆಗೆ ನೀಡಲಾಗಿದ್ದು, ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊರೊನಾ ಲಸಿಕೆ ಸುರಕ್ಷಿತವಾಗಿದ್ದು, ನಾರಾಯಣ ಹೃದಯಾಲದ ಮುಖ್ಯಸ್ಥ ಡಾ. ದೇವಿ ಶೆಟ್ಟಿ ಸೇರಿದಂತೆ ಅನೇಕರು ಲಸಿಕೆ ಪಡೆದಿದ್ದಾರೆ. ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಎಲ್ಲ ರೀತಿ ಪರೀಕ್ಷೆ ಮಾಡಿಯೇ ಅನುಮತಿ ಕೊಟ್ಟಿದೆ" ಎಂದರು.
ಇನ್ನು "ದೇಶದಾದ್ಯಂತ ಕೊರೊನಾ ಲಸಿಕೆ ಅಭಿಯಾನ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಮೂರನೇ ದಿನದವರೆಗೆ 3,81,305 ಮಂದಿ ಲಸಿಕೆ ಪಡೆದಿದ್ದಾರೆ. ಈ ಪೈಕಿ 580 ಮಂದಿಯಲ್ಲಿ ಅಲ್ಪ ಪ್ರಮಾಣದ ಅಡ್ಡ ಪರಿಣಾಮವಾಗಿದ್ದು ಇಬ್ಬರು ಮೃತಪಟ್ಟಿದ್ದಾರೆ. ಆದರೆ ಈ ಇಬ್ಬರ ಸಾವಿಗೂ ಲಸಿಕೆಗೂ ಯಾವುದೇ ರೀತಿಯ ಸಂಬಂಧವಿಲ್ಲ'' ಎಂದು ಕೇಂದ್ರ ಸರ್ಕಾರ ಹೇಳಿದೆ.
ಸೋಮವಾರ ಕರ್ನಾಟಕದಲ್ಲಿ 36,888 ಲಸಿಕೆ ನೀಡಲಾಗಿದೆ.