ಸೂರತ್, ಜ.19 (DaijiworldNews/MB) : ಗುಜರಾತ್ನ ಕೋಸಂಬಾದಲ್ಲಿ ಟ್ರಕ್ ಹರಿದು 13 ಮಂದಿ ಸ್ಥಳದಲ್ಲೇ ಸಾವನಪ್ಪಿದ ಘಟನೆ ನಡೆದಿದ್ದು, ಮೃತರ ಕುಟುಂಬಕ್ಕೆ ಪ್ರಧಾನ ಮಂತ್ರಿ ಕಾರ್ಯಾಲಯ ಹಾಗೂ ರಾಜಸ್ಥಾನ ಸಿಎಂ ಆಶೋಕ್ ಗೆಹ್ಲೂಟ್ ಅವರು ಪರಿಹಾರ ಘೋಷಣೆ ಮಾಡಿದ್ದಾರೆ.
ಅಫಘಾತದಲ್ಲಿ ಮೃತಪಟ್ಟವರನ್ನು ರಾಜಸ್ಥಾನದ ಬಾಂಸ್ವಾಡಾ ಮೂಲದವರೆಂದು ವರದಿಯಾಗಿದ್ದು ಸೋಮವಾರ ರಾತ್ರಿ ಕಾರ್ಮಿಕರು ಫೂಟ್ಪಾತ್ ಮೇಲೆ ನಿದ್ರೆಯಲ್ಲಿದ್ದಾಗ ಈ ಘಟನೆ ನಡೆದಿದೆ. ಕಬ್ಬು ತುಂಬಿದ್ದ ಟ್ರಕ್ ಚಾಲಕನ ನಿಯಂತ್ರಣಕ್ಕೆ ಸಿಗದೆ ಫೂಟ್ಪಾತ್ ಮೇಲೆ ಸಾಗಿದ್ದು, ಅಲ್ಲಿ ಮಲಗಿದ್ದವರ ಪೈಕಿ 13 ಮಂದಿ ಮೃತಪಟ್ಟಿದ್ದು ಆರು ಮಂದಿ ಗಾಯಗೊಂಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಮೃತರ ಕುಟುಂಬಸ್ಥರಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂ ಪರಿಹಾರ ನೀಡುವುದಾಗಿ ಪ್ರಧಾನಿ ಸಚಿವಾಲಯ ಘೋಷಣೆ ಮಾಡಿದೆ.
ಇನ್ನೊಂದೆಡೆ ರಾಜಸ್ಥಾನ ಸಿಎಂ ಆಶೋಕ್ ಗೆಹ್ಲೂಟ್ ಅವರೂ ಕೂಡ ಪರಿಹಾರ ಘೋಷಣೆ ಮಾಡಿದ್ದಾರೆ. ''ಬಾಂಸ್ವಾಡಾದ ಕಾರ್ಮಿಕರು ಸೂರತ್ನಲ್ಲಿ ಪ್ರಾಣ ಕಳೆದುಕೊಂಡ ದುರಂತದ ಬಗ್ಗೆ ತಿಳಿದು ಹೃದಯ ಕದಡಿದೆ. ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರಾಜಸ್ಥಾನ ಸರ್ಕಾರ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ. ನೀಡಲಾಗುತ್ತದೆ'' ಎಂದು ತಿಳಿಸಿದ್ದಾರೆ.