ಹೊಸಪೇಟೆ,ಜ.19 (DaijiworldNews/HR): "ಅರುಣಾಚಲ ಪ್ರದೇಶದಲ್ಲಿ ಚೀನಾ ಹಳ್ಳಿಯೊಂದನ್ನೂ ನಿರ್ಮಿಸಿ ಭಾರತದ ಭೂಪ್ರದೇಶ ಅತಿಕ್ರಮಿಸಿದೆ, ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿಯವರು ಯಾಕೆ ಮೌನವಹಿಸಿದ್ದಾರೆ" ಎಂದು ಪ್ರಶ್ನಿಸಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಇದು ಕೇಂದ್ರ ಸರ್ಕಾರದ ಬಹುದೊಡ್ಡ ವೈಫಲ್ಯ ಎಂದು ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿಯಲ್ಲಿ ಮಾತನಾಡಿದ ಅವರು, "ದೊಡ್ಡ ದೊಡ್ಡ ಭಾಷಣ ಮಾಡುವ ಪ್ರಧಾನಿಯವರಿಗೆ ಚೀನಾದ ಹುನ್ನಾರ ಯಾಕೆ ಗೊತ್ತಾಗಲಿಲ್ಲ? ಗೊತ್ತಿದ್ದರೆ ನಮ್ಮ ಭೂಭಾಗ ಚೀನಾದವರು ಅತಿಕ್ರಮಿಸುತ್ತಿರಲಿಲ್ಲ" ಎಂದರು.
ಇನ್ನು "ಭಾರತದ ರೈತರು ಸಂಕಷ್ಟದಲ್ಲಿದ್ದಾರೆ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕಾಯ್ದೆಗಳ ವಿರುದ್ಧ ರೈತರು ಎರಡು ತಿಂಗಳಿಂದ ನವದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಅನೇಕ ರೈತರು ಪ್ರಾಣ ಕಳೆದುಕೊಂಡಿದ್ದಾರೆ, ಇನ್ನು ಅನೇಕರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಪ್ರಧಾನಿ ಮೋದಿಯವರು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಒಂದು ಸಲವೂ ಈ ಕುರಿತು ಮಾತನಾಡಿಲ್ಲ" ಎಂದು ಹೇಳಿದ್ದಾರೆ.
"ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಖಾಲಿಸ್ತಾನಿಗಳು, ನಗರ ನಕ್ಸಲರು ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದು, ಅನ್ನದಾತರನ್ನು ಈ ರೀತಿ ಅವಹೇಳನ ಮಾಡುತ್ತಿರುವ ಬಿಜೆಪಿಯವರು ಬರುವ ದಿನಗಳಲ್ಲಿ ಇದಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.