ನವದೆಹಲಿ, ಜ.19 (DaijiworldNews/HR): ಜನವರಿ 19 ರಂದು ನಿಗದಿಯಾಗಿದ್ದ ಸಚಿವರ ಮತ್ತು ರೈತ ಸಂಘಗಳ ನಡುವಿನ ಸಭೆಯನ್ನು ಜನವರಿ 20ಕ್ಕೆ ಮುಂದೂಡಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಸೋಮವಾರ ತಿಳಿಸಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ಖಂಡಿಸಿ ರೈತರು ಪ್ರತಿಭಟಿಸುತ್ತಿದ್ದು ಈ ಕುರಿತಾದ ಸಭೆಯು ಜನವರಿ 20ರಂದು ಮಧ್ಯಾಹ್ನ 2 ಗಂಟೆಗೆ ವಿಜ್ಞಾನ ಭವನದಲ್ಲಿ ನಡೆಯಲಿದ್ದು, ರೈತರ ಪ್ರತಿನಿಧಿಗಳ ನಡುವೆ ಸುಮಾರು 10 ತಿಂಗಳ ಸುತ್ತಿನ ಮಾತುಕತೆ ನಡೆಯಲಿದೆ.
ಪ್ರತಿಭಟನಾ ನಿರತ ರೈತರ ಪ್ರತಿನಿಧಿಗಳಿಗೆ ಬರೆದ ಪತ್ರದಲ್ಲಿ, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಅಗರ್ವಾಲ್ ಅವರಿಗೆ ಕೆಲವು ಅನಿವಾರ್ಯ ಕಾರಣಗಳಿಂದಾಗಿ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕೆ ಆಗದ ಕಾರಣ ಜನವರಿ 19 ಕ್ಕೆ ನಿಗದಿಯಾಗಿದ್ದ ಸಭೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದೆ.
ಸಭೆ ಜನವರಿ 20 ರಂದು ನಡೆಯಲಿದೆ ಎಂದು ಪತ್ರದಲ್ಲಿ ತಿಳಿಸಿ, ರೈತ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.
ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳನ್ನು ಸುಧಾರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ 2020, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ 2020 ಮತ್ತು ಅಗತ್ಯ ಸರಕುಗಳನ್ನು ಜಾರಿಗೆ ತಂದಿದೆ.
ಈ ಕಾನೂನುಗಳ ಅನುಷ್ಠಾನವನ್ನು ಸುಪ್ರೀಂ ಕೋರ್ಟ್ ತಡೆಹಿಡಿದು, ಸಮಸ್ಯೆಯನ್ನು ಪರಿಹರಿಸಲು ತಜ್ಞರ ಸಮಿತಿಯನ್ನು ರಚಿಸಿದ್ದರೂ, ಕೇಂದ್ರ ಸರ್ಕಾರವು ರೈತ ಸಂಘಗಳೊಂದಿಗೆ ಸಂವಾದದ ಮಾರ್ಗವನ್ನು ತೆರೆಯಿತು.
ಸರ್ಕಾರದ ಪರವಾಗಿ ಮಾತುಕತೆಗಳನ್ನು ನಡೆಸುತ್ತಿರುವ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಾತನಾಡಿ, "ದೇಶದ ರೈತರ ಹಿತದೃಷ್ಟಿಯಿಂದ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈತರ ಹಿತಕ್ಕಾಗಿಯೇ ಈ ಮಸೂದೆಯನ್ನು ಅನುಷ್ಟಾನಗೊಳಿಸಿದೆ" ಎಂದು ಪುನರುಚ್ಚರಿಸಿದ್ದಾರೆ.