ನವದೆಹಲಿ, ಜ.19 (DaijiworldNews/PY): ಮಧ್ಯಪ್ರದೇಶದ ಉಮಾರಿಯಾ ನಗರದಲ್ಲಿ 13 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಧ್ಯಪ್ರದೇಶ ಸರ್ಕಾರಕ್ಕೆ ಹಾಗೂ ಅಲ್ಲಿನ ಪೊಲೀಸ್ ಮಹಾನಿರ್ದೇಶಕರಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ನೋಟಿಸ್ ನೀಡಿದ್ದು, ವಿವರವಾದ ವರದಿಯನ್ನು ಸಲ್ಲಿಸಲು ತಿಳಿಸಿದೆ.
ಇಲ್ಲಿ ಪ್ರದೇಶದಲ್ಲಿ ನಡೆದ ಈ ಘಟನೆಯು, ಕಾನೂನು ಹಾಗೂ ಸುವ್ಯವಸ್ಥೆ ಸ್ಥಿತಿಯ ಬಗ್ಗೆ ಪ್ರಶ್ನಿಸುತ್ತಿದೆ ಎಂದು ಆಯೋಗ ಹೇಳಿದೆ.
ಅಯೋಗವು 13 ರ್ಷದ ಬಾಲಕಿಯ ಮೇಲೆ ನಡೆದಿರುವ ಅತ್ಯಾಚಾರದ ವಿಚಾರವನ್ನು ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡಿದ್ದು, ಘಟನೆಯ ಬಗ್ಗೆ ವರದಿ ನೀಡುವಂತೆ ಮಧ್ಯಪ್ರದೇಶ ಸರ್ಕಾರಕ್ಕೆ ಹಾಗೂ ಅಲ್ಲಿನ ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ನೀಡಲಾಗಿದೆ. ನಾಲ್ಕು ವಾರಗಳ ಒಳಗಾಗಿ ಘಟನೆಯ ಬಗ್ಗೆ ವರದಿ ನೀಡುವಂತೆ ತಿಳಿಸಲಾಗಿದೆ.
ವರದಿಯಲ್ಲಿ, ಉಳಿದ ಆರೋಪಿಗಳ ಬಂಧನ, ಸಂತ್ರಸ್ತೆಗೆ ನೀಡಲಾದ ಕೌನ್ಸೆಲಿಂಗ್, ಆಕೆಗೆ ನೀಡಲು ಉದ್ದೇಶಿಸಿರುವ ಪರಿಹಾರ ಹಾಗೂ ಪುನರ್ವಸತಿ ಕ್ರಮಗಳ ಬಗ್ಗೆ ಉಲ್ಲೇಖಿಸಿರಬೇಕು ಎಂದು ಸೂಚನೆ ನೀಡಲಾಗಿದೆ.
ಇದು ಸಂತ್ರಸ್ತೆಯ ಮಾನವಹಕ್ಕು ಉಲ್ಲಂಘನೆಯ ಪ್ರಕರಣವಾಗಿದೆ. ಕಾನೂನು ಜಾರಿ ಏಜೆನ್ಸಿಗಳು ನಾಗರಿಕಗೆ ಸುರಕ್ಷಿತವಾದ ವಾತಾವರಣ ನೀಡಿಲ್ಲ. ಅಲ್ಲದೇ, ತಮ್ಮ ಕಾನೂನುಬದ್ದ ಕರ್ತವ್ಯವನ್ನು ಪಾಲಿಸಲು ಯಶಸ್ವಿಯಾಗಿಲಲ ಎಂದು ಆಯೋಗ ತಿಳಿಸಿದೆ.
ಜ.4ರಂದು ಮಧ್ಯಪ್ರದೇಶದ ಉಮಾರಿಯಾ ಮಾರುಕಟ್ಟೆ ಪ್ರದೇಶದಿಂದ ಬಾಲಕಿಯನ್ನು ಆಕೆಯ ಪರಿಚಿತ ವ್ಯಕ್ತಿಗಳೇ ಅಪಹರಿಸಿದ್ದಾರೆ. ನಂತರ ನಿರ್ಜನವಾದ ಪ್ರದೇಶಕ್ಕೆ ಕರೆತಂದು ಒಂಭತ್ತು ಮಂದಿ ಎರಡು ದಿನಗಳ ಕಾಲ ಅತ್ಯಾಚಾರ ಎಸಗಿದ್ದಾರೆ ಎಂದು ವರದಿ ತಿಳಿಸಿದೆ.
ಬಾಲಕಿಯನ್ನು ಜ.11ರಂದು ಪುನಃ ಅಪಹರಿಸಿ ಹಿಂದಿನ ಘಟನೆಯ ಮೂವರು ಆರೋಪಿಗಳು ಹಾಗೂ ಇಬ್ಬರು ಅಪರಿಚಿತ ಟ್ರಕ್ ಚಾಲಕರು ಅತ್ಯಾಚಾರ ಎಸಗಿದ್ದಾರೆ ಎಂದು ಆಯೋಗ ತಿಳಿಸಿದೆ.