ನವದೆಹಲಿ, ಜ.19 (DaijiworldNews/PY): ಬೆಂಗಳೂರು ದಕ್ಷಿಣ ಉತ್ತರಹಳ್ಳಿ ಹೋಬಳಿಯ ಹಲಗೆವಡೇರಹಳ್ಳಿ ಗ್ರಾಮದ ಡಿನೋಟಿಫಿಕೇಶನ್ ವಿಚಾರಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ಸೋಮವಾರ ನೋಟಿಸ್ ನೀಡಿದೆ.
ಈ ವಿಚಾರದ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಅರ್ಜಿ ಸಲ್ಲಿಸಿದ್ದರು. ರಾಜ್ಯ ಸರ್ಕಾರ ಹಾಗೂ ದೂರುದಾರ ಎಂ.ಎಸ್ ಮಹಾದೇವಿ ಅವರಿಗೆ ಪ್ರತಿಕ್ರಿಯಿಸುವಂತೆ ನ್ಯಾಯಮೂರ್ತಿಗಳಾದ ಅಶೋಕ್ ಭೂಷನ್ ಹಾಗೂ ಎಂ.ಆರ್.ಷಾ ಅವರ ನ್ಯಾಯಪೀಠವು ಸೂಚನೆ ನೀಡಿದ್ದು, ಆರು ತಿಂಗಳ ಗಡುವು ನೀಡಿದೆ.
ಹೆಚ್.ಡಿ.ಕುಮಾರಸ್ವಾಮಿ ಅವರ ಪರ ಹಾಜರಿದ್ದ ವಕೀಲ ರಂಜಿತ್ ಕುಮಾರ್ ವಾದಿಸಿದ್ದು, "2018ರಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 19 (1) (ಬಿ)ನಲ್ಲಿ ಮಾಡಿದ ತಿದ್ದುಪಡಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆ ಸಂದರ್ಭ ಅರ್ಜಿದಾರರು ಹುದ್ದೆಯಲ್ಲಿ ಇಲ್ಲದಿದ್ದರೂ ಕೂಡಾ ಅನುಮತಿ ಅಗತ್ಯ" ಎಂದು ತಿಳಿಸಿದ್ದಾರೆ.
ವಿಶೇಷ ನ್ಯಾಯಾಲಯವು 2019ರ ಸೆಪ್ಟೆಂಬರ್ 4ರಂದು ಹೆಚ್.ಡಿ.ಕೆ ಹಾಗೂ ಇತರರ ವಿರುದ್ದ ಕ್ರಿಮಿನಲ್ ಪ್ರಕರಣವನ್ನು ನೋಂದಾಯಿಸಲು ನಿರ್ದೇಶಿಸಿತ್ತು. ಅಲ್ಲದೇ, 2012ರಲ್ಲಿ ಸಲ್ಲಿಸಿದ್ದ ದೂರಿನಲ್ಲಿ ಎಲ್ಲಾ ಆರೋಪಿಗಳ ವಿರುದ್ದ ಸಮನ್ಸ್ ಜಾರಿ ಮಾಡಲಾಗಿತ್ತು.