ನವದೆಹಲಿ, ಜ.19 (DaijiworldNews/MB) : ''ದೇಶದಾದ್ಯಂತ ಕೊರೊನಾ ಲಸಿಕೆ ಅಭಿಯಾನ ನಾಲ್ಕನೇ ದಿನಕ್ಕೆ ಕಾಲಿರಿಸಿದೆ. ಮೂರನೇ ದಿನದವರೆಗೆ 3,81,305 ಮಂದಿ ಲಸಿಕೆ ಪಡೆದಿದ್ದಾರೆ. ಈ ಪೈಕಿ 580 ಮಂದಿಯಲ್ಲಿ ಅಲ್ಪ ಪ್ರಮಾಣದ ಅಡ್ಡ ಪರಿಣಾಮವಾಗಿದ್ದು ಇಬ್ಬರು ಮೃತಪಟ್ಟಿದ್ದಾರೆ. ಆದರೆ ಈ ಇಬ್ಬರ ಸಾವಿಗೂ ಲಸಿಕೆಗೂ ಯಾವುದೇ ರೀತಿಯ ಸಂಬಂಧವಿಲ್ಲ'' ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮನೋಹರ್ ಅಗ್ನಾನಿ ಅವರು, ''ದೇಶದಲ್ಲಿ ಲಸಿಕೆ ಅಭಿಯಾನ ಆರಂಭವಾದ ಬಳಿಕ 580 ಮಂದಿಯಲ್ಲಿ ವ್ಯತಿರಿಕ್ತ ಪರಿಣಾಮಗಳು ಕಂಡು ಬಂದಿದೆ. 7 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು ಈ ಪೈಕಿ ಇಬ್ಬರು ಕರ್ನಾಟಕದವರು. ಒಬ್ಬರು ಚಿತ್ರದುರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮತ್ತೊಬ್ಬರು ಚಳ್ಳಕೆರೆ ಆಸ್ಪತ್ರೆಗೆ ದಾಖಲಾಗಿದ್ದಾರೆ'' ಎಂದು ತಿಳಿಸಿದ್ದಾರೆ.
''ಇನ್ನು ಉತ್ತರ ಪ್ರದೇಶದ ಮೊರಾಬಾದ್ನಲ್ಲಿ ಮತ್ತು ಕರ್ನಾಟಕದ ಬಳ್ಳಾರಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಆದರೆ ಅವರ ಸಾವಿಗೆ ಲಸಿಕೆ ಕಾರಣವಲ್ಲ. ಲಸಿಕೆ ಪಡೆದು ಗಂಭೀರವಾದ ಯಾವುದೇ ಪ್ರಕರಣಗಳು ದಾಖಲಾಗಿಲ್ಲ'' ಎಂದು ಸ್ಪಷ್ಟನೆ ನೀಡಿದ್ದಾರೆ.
''ಸೋಮವಾರ ಒಂದು ದಿನದಲ್ಲಿ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1,48,266 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ಅಂದಾಜು ಲೆಕ್ಕಾಚಾರದಂತೆ ಈವರೆಗೆ 3,81,305 ಮಂದಿಗೆ ಲಸಿಕೆ ನೀಡಲಾಗಿದೆ. ಸೋಮವಾರ ಕರ್ನಾಟಕದಲ್ಲಿ 36,888, ಬಿಹಾರದಲ್ಲಿ-8,656, ಕೇರಳ-7,070, ತೆಲಂಗಾಣ-10,352, ದೆಹಲಿ-3,111, ಅಸ್ಸಾಂ- 1,822, ತಮಿಳುನಾಡು-7,628, ಮಧ್ಯಪ್ರದೇಶ-6,665, ಪಶ್ಚಿಮ ಬಂಗಾಳ-1,158 ಮಂದಿ ಲಸಿಕೆ ಪಡೆದಿದ್ದಾರೆ'' ಎಂದು ತಿಳಿಸಿದ್ದಾರೆ.