ಬೆಳ್ತಂಗಡಿ, ಜ.19 (DaijiworldNews/MB) : ಆಘಾತಕಾರಿ ಘಟನೆಯೊಂದರಲ್ಲಿ ಪುತ್ರನೊಬ್ಬ ತನ್ನ ತಂದೆಯನ್ನು ಮರದ ಪಕ್ಕಾಸಿನ ತುಂಡಿನಿಂದ ಹೊಡೆದು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಜನವರಿ 18 ರ ಸೋಮವಾರ ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ನಡು ಮುಂಡ್ಯೊಟ್ಟು ಎಂಬಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಪುತ್ರನನ್ನು ಬಂಧಿಸಲಾಗಿದೆ.
ಮೃತರನ್ನು ಶ್ರೀಧರ ಪೂಜಾರಿ (56) ಎಂದು ಗುರುತಿಸಲಾಗಿದೆ. ಅವರ ಪುತ್ರ ಹರೀಶ ಪೂಜಾರಿ (27) ಆರೋಪಿತ. ಮೃತರಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾಳೆ.
ಪುತ್ರ ಹಾಗೂ ತಂದೆಯ ನಡುವೆ ಪುತ್ರನ ಮದುವೆಗೆ ಸಂಬಂಧಿಸಿದಂತೆ ಮನಸ್ತಾಪವಿದ್ದು, ಇದೇ ವಿಚಾರದಲ್ಲಿ ಪ್ರತಿ ದಿನ ಆರೋಪಿ ಹರೀಶ್ ತಂದೆಯೊಂದಿಗೆ ಗಲಾಟೆ ನಡೆಸುತ್ತಿದ್ದನು. ಸೋಮವಾರ ಮಧ್ಯಾಹ್ನ ಆರೋಪಿತನು ತಂದೆಯೊಂದಿಗೆ ಗಲಾಟೆ ನಡೆಸಿದ್ದನು. ಬಳಿಕ ಶ್ರೀಧರ ಪೂಜಾರಿಯವರು ತನ್ನ ಸಹೋದರನ ಮನೆಯಲ್ಲಿ ಇರುವಾಗ ಅಲ್ಲಿಗೆ ಬಂದ ಆರೋಪಿ ತಂದೆಯೊಂದಿಗೆ ಗಲಾಟೆ ನಡೆಸಿ ಮರದ ಪಕ್ಕಾಸಿನ ತುಂಡಿನಿಂದ ಹಲ್ಲೆ ನಡೆಸಿ ತೀವ್ರ ಗಾಯಗೊಳಿಸಿ ಅಲ್ಲಿಂದ ಪರಾರಿಯಾಗಿದ್ದನು.
ತೀವ್ರವಾಗಿ ಗಾಯಗೊಂಡಿದ್ದ ಶ್ರೀಧರ ಪೂಜಾರಿಯವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 302 ಐಪಿಸಿ ಯಂತೆ ಪ್ರಕರಣ ದಾಖಲಿಸಿ, ಆರೋಪಿ ಪುತ್ರನನ್ನು ಬಂಧಿಸಲಾಗಿದೆ.