ನವದೆಹಲಿ, ಜ.19 (DaijiworldNews/MB) : ಸದಾ ವಿವಾದಾತ್ಮಕ ಟ್ವೀಟ್ಗಳ ಮೂಲಕವೇ ಸುದ್ದಿಯಾಗುವ ಬಾಲಿವುಡ್ ನಟಿ ಕಂಗನಾ ರಣಾವತ್ ಈಗ ಮತ್ತೆ ಉದ್ರೇಕಕಾರಿ ಟ್ವೀಟ್ ಮೂಲಕ ಸುದ್ದಿಯಾಗಿದ್ದಾರೆ.
ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ತಾಂಡವ್ ವೆಬ್ ಸೀರೀಸ್ ವಿರುದ್ದ ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವೆಬ್ಸೀರೀಸ್ ವಿರುದ್ದ ಟೀಕೆ ವ್ಯಕ್ತವಾಗಿತ್ತಿದೆ. ಏತನ್ಮಧ್ಯೆ ಈ ಬಗ್ಗೆ ಟ್ವೀಟ್ ಮಾಡಿರುವ ಕಂಗನಾ 'ಅವರ ತಲೆ ಕತ್ತರಿಸುವ ಸಂದರ್ಭ ಬಂದಿದೆ ಎಂದು ಹೇಳಿದ್ದಾರೆ.
ಭಗವಾನ್ ಕೃಷ್ಣ ಶಿಶುಪಾಲ ಮಾಡಿದ್ದ 99 ಪಾಪಗಳನ್ನು ಕ್ಷಮಿಸಿದ್ದರೂ ಕೂಡಾ ಮೊದಲು ಶಾಂತಿ ನಂತರ ಕ್ರಾಂತಿಯಾಗಬೇಕು. ಅವರ ತಲೆಗಳನ್ನು ಕತ್ತರಿಸುವ ಸಮಯವಾಗಿದೆ, ಜೈ ಶ್ರೀ ಕೃಷ್ಣ ಎಂದು ಅತುಲ್ ಮಿಶ್ರಾ ಎಂಬ ಟ್ವಿಟರ್ ಬಳಕೆದಾರನ ಟ್ವೀಟ್ಗೆ ಕಂಗನಾ ಪ್ರತಿಕ್ರಿಯಿಸಿದ್ದಾರೆ. ಬಳಿಕ ಅದನ್ನು ಡಿಲೀಟ್ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಆನ್ ಲೈನ್ ಕಿರುಕುಳ, ನಿಂದನೆಗಳನ್ನು ತಡೆಯುವ ಟೀಮ್ ಸಾತ್ ಸಂಘಟನೆಯು ಕಂಗನಾರ ಈ ಟ್ವೀಟ್ ಅನ್ನು ಸ್ಕ್ರೀನ್ ಶಾಟ್ ನೊಂದಿಗೆ ಹಂಚಿಕೊಂಡಿದೆ. ಹಲವಾರು ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸಿದ್ದು ಕಂಗನಾ ವಿರುದ್ದ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.