ಬೆಂಗಳೂರು, ಜ.19 (DaijiworldNews/MB) : ನಕಲಿ ದಾಖಲೆ ಸೃಷ್ಟಿ ಮಾಡಿ ಜಮೀನನ್ನು ಅಕ್ರಮವಾಗಿ ಹಿಂಪಡೆದ ಆರೋಪ ಪ್ರಕರಣದ ರದ್ದತಿಗಾಗಿ ಸಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ನಿರಾಣಿ ವಿರುದ್ಧ ಉದ್ಯಮಿ ಆಲಂ ಪಾಷಾ ಅವರು ದೂರು ದಾಖಲಿಸಿದ್ದಾರೆ. ದೂರಿನಲ್ಲಿ ತನ್ನ ಒಡೆತನಕ್ಕೆ ಸೇರಿದ ಕಂಪೆನಿಗೆ ದೇವನಹಳ್ಳಿ ಇಂಡಸ್ಟ್ರಿಯಲ್ ಪಾರ್ಕ್ನಲ್ಲಿ ಸರಕಾರದಿಂದ ಮಂಜೂರು ಮಾಡಿದ್ದ ಜಮೀನನ್ನು ಅಕ್ರಮವಾಗಿ ಹಿಂಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
2010-11ರಲ್ಲಿ ಸರ್ಕಾರವು ದೇವನಹಳ್ಳಿಯ ಇಂಡಸ್ಟ್ರಿಯಲ್ ಹಾರ್ಡ್ವೇರ್ ಪಾರ್ಕ್ನಲ್ಲಿ ನನ್ನ ಕಂಪೆನಿಗೆ 26 ಎಕರೆ ಜಮೀನನ್ನು ಮಂಜೂರು ಮಾಡಿತ್ತು. ಬಳಿಕ 2011ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಯಡಿಯೂರಪ್ಪನವರು, ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ ಅವರೊಂದಿಗೆ ಸೇರಿ ನಕಲಿ ದಾಖಲೆ ಸೃಷ್ಟಿ ಮಾಡಿ ಈ ಜಮೀನನ್ನು ವಾಪಾಸ್ ಪಡೆದಿದ್ದಾರೆ. ಅಷ್ಟೇ ಅಲ್ಲದೇ ಅದನ್ನು ಮತ್ತೆ ಬೇರೆ ಕಂಪೆನಿಗೆ ಮಾರಾಟ ಮಾಡಿದ್ದಾರೆ ಎಂದು 2016ರಲ್ಲಿ ಲೋಕಾಯುಕ್ತ ಕೋರ್ಟ್ಗೆ ಆಲಂ ಪಾಷಾ ಖಾಸಗಿ ದೂರು ದಾಖಲಿಸಿದ್ದರು. ಆದರೆ ಅವರು ದೂರು ದಾಖಲು ಮಾಡಲು ಮೊದಲೇ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಈ ದೂರನ್ನು ರದ್ದು ಮಾಡಿತ್ತು. ಬಳಿಕ ಈ ದೂರು ವಜಾ ಆದೇಶದ ರದ್ದತಿ ಕೋರಿ ಪಾಷಾ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಈಗ ಹೈಕೋರ್ಟ್ ಪೂರ್ವಾನುಮತಿ ಪಡೆಯುವುದು ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದ ನ್ಯಾ. ಮೈಕಲ್ ಕುನ್ಹಾ ಅವರಿದ್ದ ನ್ಯಾಯಪೀಠವು 2021ರ ಜ.5ರಂದು ಸಿಎಂ ವಿರುದ್ದದ ಈ ಪ್ರಕರಣದ ಮುಂದುವರಿಕೆಗೆ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆ ಪ್ರಕರಣ ರದ್ದತಿ ಕೋರಿ ಬಿಎಸ್ವೈ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.