ಚಿಕ್ಕಮಗಳೂರು,ಜ.18 (DaijiworldNews/HR): "ಭಾಷಾವಾರು ಪ್ರಾಂತ್ಯ ರಚನೆಯಾದಾಗ ಭಾರತದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು, ಹಾಗಾಗಿ ಗಡಿ ವಿಚಾರದಲ್ಲಿ ಅನ್ಯಾಯವಾಗಿದ್ದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಕಾಂಗ್ರೆಸನ್ನು ಪ್ರಶ್ನಿಸಲಿ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಗಡಿ ವಿಚಾರವನ್ನು ಆಗಾಗ ಕೆದಕಿ ರಾಜಕೀಯ ಬೇಳೆ ಬೇಯಿಸಿಕೊಳ್ಳವುದು ಬಹಳ ವರ್ಷಗಳಿಂದ ನಡೆಯುತ್ತಿದ್ದು, ಕಾಂಗ್ರೆಸ್ ಹೆಗಲ ಮೇಲೆ ಕುಳಿತು ಮುಖ್ಯಮಂತ್ರಿಯಾಗಿ ವಿವಾದಗಳನ್ನು ಕೆದುಕುವುದು ಅನ್ಯಾಯ ಮಾಡಿದವರ ಹೆಗಲಲ್ಲೇ ಕುಳಿತು ಮಾತನಾಡಿದಂತೆ. ನೈತಿಕತೆ ಇದ್ದರೆ ಕಾಂಗ್ರೆಸ್ ಹೆಗಲಿನಿಂದ ಕೆಳಗಿಳಿದು ಮಾತನಾಡಲಿ" ಎಂದರು
ಇನ್ನು ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಬದಲಾವಣೆ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಜಾತಿವಾದ, ವೋಟ್ ಬ್ಯಾಂಕ್ಗಾಗಿ ಓಲೈಕೆ ರಾಜಕಾರಣ ಮಾಡುವವರಿಗೆ ಆರ್ಎಸ್ಎಸ್ ಮೂಲ ಗೊತ್ತಾಗಲ್ಲ. ಅದು ಅವರಿಗೆ ಅರ್ಥವೂ ಆಗಲ್ಲ" ಎಂದು ಹೇಳಿದ್ದಾರೆ.