ಬೆಳ್ತಂಗಡಿ, ಜ. 18 (DaijiworldNews/MB) : ಬೆಳ್ತಂಗಡಿಯ ಉಜಿರೆಯಲ್ಲಿ ಗ್ರಾಮ ಪಂಚಾಯತಿ ಚುನಾವಣಾ ಮತ ಎಣಿಕೆ ಪ್ರಕ್ರಿಯೆಯ ಸಂದರ್ಭ ಎಸ್ಡಿಪಿಐ ಹಾಗೂ ಬಿಜೆಪಿ ಗುಂಪಿನ ವಿಜಯೋತ್ಸವದ ಸಂದರ್ಭ ಕೇಳಿ ಬಂದ ಪಾಕಿಸ್ತಾನ ಜಿಂದಾಬಾದ್ ಘೋಷಣೆಗೆ ಸಂಬಂಧಿಸಿ ಎಸ್ಡಿಪಿಐ ಮುಖಂಡರೊಬ್ಬರು ಬಿಜೆಪಿಗೆ ಸವಾಲೊಂದನ್ನು ಒಡ್ಡಿದ್ದಾರೆ. ''ಪಾಕಿಸ್ತಾನಕ್ಕೆ ಜೈ ಎಂದು ನೀವು ಹೇಳಿಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯಲ್ಲಿ ಆಣೆ ಮಾಡಲು ಬರುತ್ತೀರಾ, ನಾವು ಬರಲು ಸಿದ್ದ'' ಎಂದು ಎಸ್ಡಿಪಿಐ ನಾಯಕರೊಬ್ಬರು ಬಿಜೆಪಿಗೆ ಸವಾಲೆಸೆದಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎಸ್ಡಿಪಿಐ ನಾಯಕರೊಬ್ಬರು, ''ಎಸ್ಡಿಪಿಐ ಮುಖಂಡರು ಪಾಕಿಸ್ತಾನಕ್ಕೆ ಜೈ ಎಂದು ಹೇಳುವುದರಿಂದ ಎಸ್ಡಿಪಿಐ ಪಕ್ಷಕ್ಕೆ ಯಾವುದಾದರೂ ಗಂಟು ಸಿಗುತ್ತದೆ ಎಂದಾದರೆ ನಾವು ಖಂಡಿತವಾಗಿಯೂ ಹೇಳಬಹುದಿತ್ತು. ಆದರೆ ನಮಗೆ ಯಾವ ಗಂಟು ಸಿಗುವುದಿಲ್ಲ. ಬದಲಾಗಿ ನಮ್ಮ ಮಾನ ಮರ್ಯಾದೆ ಹೋಗುವುದು ಅದರಿಂದಲೇ. ಈ ಭೂಮಿ, ಈ ಮಣ್ಣು, ಇಲ್ಲಿನ ಜನರಿಗಾಗಿ ಹೋರಾಡುವವರೆ ಸೋಶಿಯಲ್ ಡೆಮಾಕ್ರಿಟಿಕ್ ಪಾರ್ಟಿ ಆಫ್ ಇಂಡಿಯಾದವರು'' ಎಂದು ಮುಖಂಡರು ಹೇಳಿದ್ದಾರೆ.
''ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಗೆ ನನ್ನದೊಂದು ಸವಾಲು. ನೀವು ನಂಬಿದರೆ ಬನ್ನಿ. ಪಾಕಿಸ್ತಾನಕ್ಕೆ ಜೈ ಎಂದು ನೀವು ಹೇಳಿಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯಲ್ಲಿ ಆಣೆ ಮಾಡಲು ಬರುತ್ತೀರಾ. ನಾವು ಸಿದ್ದ'' ಎಂದು ಸವಾಲು ಹಾಕಿದ್ದಾರೆ.