ಅಹಮದಾಬಾದ್, ಜ. 18 (DaijiworldNews/MB) : ಮೂರು ಅದಾನಿ ವಿಮಾನ ನಿಲ್ದಾಣಗಳಾದ ಅಹಮದಾಬಾದ್, ಮಂಗಳೂರು ಮತ್ತು ಲಕ್ನೋದ ಏರ್ಪೋರ್ಟ್ಸ್ ಕೌನ್ಸಿಲ್ ಇಂಟರ್ನ್ಯಾಶನಲ್ (ಎಸಿಐ) ವಿಮಾನ ನಿಲ್ದಾಣ ಆರೋಗ್ಯ ಮಾನ್ಯತೆ (ಎಎಚ್ಎ) ಪ್ರಮಾಣಪತ್ರವನ್ನು ಪಡೆದಿದೆ. ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ವಿಮಾನ ನಿಲ್ದಾಣಗಳು ಜಾರಿಗೆ ತಂದಿರುವ ಅಸಾಧಾರಣ ಪೂರ್ವಭಾವಿ ಕ್ರಮಗಳನ್ನು ಜಾಗತಿಕವಾಗಿ ಗುರುತಿಸುವಿಕೆಯ ಪ್ರತೀಕವಾಗಿದೆ.
118 ಚೆಕ್ ಪಾಯಿಂಟ್ಗಳ ಆಧಾರದ ಮೇಲೆ ಪ್ರಸ್ತುತಪಡಿಸಿದ ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರ ಎಎಚ್ಎ ಕಾರ್ಯಕ್ರಮದ ಅಡಿಯಲ್ಲಿ ಎಸಿಐ ಮೌಲ್ಯಮಾಪನ ಪ್ರಕ್ರಿಯೆ ನಡೆಸಲಾಗುತ್ತದೆ. ಎಸಿಐ ಏವಿಯೇಷನ್ ಬಿಸಿನೆಸ್ ರಿಸ್ಟಾರ್ಟ್, ಇತರೆ ಮಾರ್ಗಸೂಚಿಗಳು, ಐಸಿಎಒ ಕೌನ್ಸಿಲ್ ಏವಿಯೇಷನ್ ರಿಕವರಿ ಟಾಸ್ಕ್ ಫೋರ್ಸ್ ಶಿಫಾರಸು ಮಾಡಿದ ಆರೋಗ್ಯ ಕ್ರಮಗಳನ್ನು ಪಾಲಿಸಿದ ಹಿನ್ನೆಲೆ ಈ ವಿಮಾನ ನಿಲ್ದಾಣದಲ್ಲಿ ಎಲ್ಲಾ ಪ್ರಯಾಣಿಕರು ಸುರಕ್ಷಿತ ಪ್ರಯಾಣದ ಅನುಭವ ಹೊಂದಿದ್ದಾರೆಯೇ ಎಂದು ಖಚಿತಪಡಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅದಾನಿ ವಿಮಾನ ನಿಲ್ದಾಣಗಳ ಸಿಇಒ ಬೆಹ್ನಾಡ್ ಝಂಡಿ, ''ಈ ಮಾನ್ಯತೆಯು ಕೊರೊನಾ ಸಂದರ್ಭ ಹಾಗೂ ನಂತರದ ವ್ಯಾಕ್ಸಿನೇಷನ್ ಡ್ರೈವ್ ಹಿನ್ನೆಲೆಯಲ್ಲಿ ವಾಯು ಸಂಚಾರವನ್ನು ಪುನರುಜ್ಜೀವನಗೊಳಿಸುವ ಅನ್ವೇಷಣೆಯಲ್ಲಿ ಈ ಮಾನ್ಯತೆ ಮಹತ್ವದ ಹೆಜ್ಜೆಯಾಗಿದೆ. ಇದು ಜಾಗತಿಕ ಸಾಂಕ್ರಾಮಿಕ ರೋಗ ಹರಡುವಿಕೆ ಮತ್ತು ನಿಯಂತ್ರಣದ ಮಧ್ಯೆ ಲಕ್ನೋ, ಅಹಮದಾಬಾದ್ ಮತ್ತು ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ಪಾಲಿಸಲಾಗುವ ಆರೋಗ್ಯ ಮತ್ತು ಸುರಕ್ಷತಾ ಮಾನದಂಡಗಳ ಮೇಲೆ ವಿಶ್ವಾಸವನ್ನು ಮೂಡಿಸುತ್ತದೆ. ಜಾಗತಿಕವಾಗಿ ಅತ್ಯುತ್ತಮವಾದ ಕ್ರಮದ ಪಾಲನೆಯ ಜೊತೆ ನಮ್ಮ ಸನ್ನದ್ಧತೆಯನ್ನು ಬಲಪಡಿಸಲು ನಾವು ಬದ್ಧರಾಗಿರುತ್ತೇವೆ. ಮೂರು ಸ್ಥಳದಲ್ಲಿಯೂ ನಾವು ಸುರಕ್ಷಿತ ಪ್ರಯಾಣದ ಅನುಭವ ನೀಡಲು ಬದ್ದರಾಗಿದ್ದೇವೆ'' ಎಂದು ಹೇಳಿದ್ದಾರೆ.
ವಿಮಾನ ನಿಲ್ದಾಣದ ಎಲ್ಲಾ ಸ್ಥಳಗಳಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿಗಳಿಗೆ ವಿಮಾನ ನಿಲ್ದಾಣಗಳು ಕೈಗೊಂಡಿರುವ ಆರೋಗ್ಯ ಮತ್ತು ಸುರಕ್ಷತಾ ಕ್ರಮ ಪಾಲಿಸಲಾಗುತ್ತಿದೆಯೇ ಎಂದು ಎಸಿಐ ಮೌಲ್ಯಮಾಪನ ಮಾಡುತ್ತದೆ.
ಈ ಮಾನ್ಯತೆಯು ಮುಂದಿನ 12 ತಿಂಗಳುಗಳಿಗೆ ಅನ್ವಯಯಿಸುತ್ತದೆ. ವಿಮಾನ ನಿಲ್ದಾಣದ ಸೌಲಭ್ಯಗಳು ಸುರಕ್ಷಿತವಾಗಿರುತ್ತವೆ ಮತ್ತು ಆರೋಗ್ಯದ ಅಪಾಯಗಳನ್ನು ಕಡಿಮೆ ಮಾಡಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪ್ರಯಾಣಿಕರಿಗೆ ಧೈರ್ಯ ತುಂಬಲು ಈ ಕಾರ್ಯಕ್ರಮವನ್ನು ಆರಂಭಿಸಲಾಗಿದೆ.
"ವಿಮಾನ ನಿಲ್ದಾಣದ ಆರೋಗ್ಯ ಮಾನ್ಯತೆಯನ್ನು ಪಡೆದುಕೊಂಡಿದ್ದಕ್ಕಾಗಿ ಅಹಮದಾಬಾದ್, ಲಕ್ನೋ ಮತ್ತು ಮಂಗಳೂರಿನಲ್ಲಿರುವ ಅದಾನಿ ಗ್ರೂಪ್ ವಿಮಾನ ನಿಲ್ದಾಣಗಳಿಗೆ ಅಭಿನಂದನೆಗಳು. ಲಸಿಕೆ ವಿತರಣೆ ನಡೆಯುತ್ತಿರುವುದರಿಂದ, ನಮ್ಮ ಉದ್ಯಮವು ಪುನರಾರಂಭಿಸಲು ಮತ್ತು ನಿರಂತರ ಕಾರ್ಯಾಚರಣೆಗಳನ್ನು ಮುಂದುವರಿಸಲು ಸಿದ್ಧವಾಗುತ್ತಿರುವುದರಿಂದ ವಿಮಾನ ಪ್ರಯಾಣದ ಬಗ್ಗೆ ಸಾರ್ವಜನಿಕರ ವಿಶ್ವಾಸವನ್ನು ಪಡೆಯುವುದು ನಿರ್ಣಾಯಕವಾಗಿದೆ. ಅದಾನಿ ಸಮೂಹ ವಿಮಾನ ನಿಲ್ದಾಣಗಳು ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಜಾಗತಿಕವಾಗಿ ಗುರುತಿಸಲ್ಪಟ್ಟ ಮಾನದಂಡಗಳನ್ನು ಪ್ರಯಾಣಿಕರು ಮತ್ತು ಉದ್ಯೋಗಿಗಳು ಪಾಲಿಸುವಂತೆ ತಿಳಿಸುವ ಮೂಲಕ ಸುರಕ್ಷತಾ ಕ್ರಮ ಪಾಲನೆಗೆ ದಾರಿ ಮಾಡಿಕೊಡುತ್ತಿದೆ'' ಎಂದು ಎಸಿಐ ಏಷ್ಯಾ-ಪೆಸಿಫಿಕ್ ಮಹಾನಿರ್ದೇಶಕ ಸ್ಟೆಫಾನೊ ಬರೋನ್ಸಿ ಹೇಳಿದರು.
ಎಸಿಐ ವಿಮಾನ ನಿಲ್ದಾಣ ಆರೋಗ್ಯ ಮಾನ್ಯತೆ (ಎಎಚ್ಎ) ಕಾರ್ಯಕ್ರಮವು ವಿಮಾನ ನಿಲ್ದಾಣಗಳಿಗೆ ಪ್ರಯಾಣಿಕರು, ಸಿಬ್ಬಂದಿ, ನಿಯಂತ್ರಕರು ಮತ್ತು ಸರ್ಕಾರಗಳಿಗೆ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡುತ್ತಿರುವುದರ ಮಾಪನದ ಸ್ಥಾನ ಪ್ರದರ್ಶನಕ್ಕೆ ಅನುವು ಮಾಡಿಕೊಡುತ್ತದೆ.
ಅದಾನಿ ವಿಮಾನ ನಿಲ್ದಾಣಗಳ ಬಗ್ಗೆ ಅದಾನಿ ಗ್ರೂಪ್ನ ಪ್ರಮುಖ ಕಂಪನಿಯಾದ ಅದಾನಿ ಎಂಟರ್ಪ್ರೈಸಸ್ನ ಅಂಗಸಂಸ್ಥೆಯಾದ ಅದಾನಿ ವಿಮಾನ ನಿಲ್ದಾಣಗಳು ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ನಡೆಸಿದ ಜಾಗತಿಕ ಸ್ಪರ್ಧಾತ್ಮಕ ಟೆಂಡರಿಂಗ್ ಪ್ರಕ್ರಿಯೆಯ ಮೂಲಕ 50 ವರ್ಷಗಳ ಅವಧಿಗೆ ಅಹಮದಾಬಾದ್, ಲಕ್ನೋ, ಮಂಗಳೂರು, ಜೈಪುರ, ಗುವಾಹಟಿ ಮತ್ತು ತಿರುವನಂತಪುರಂ ಎಂಬ ಆರು ವಿಮಾನ ನಿಲ್ದಾಣಗಳನ್ನು ಆಧುನೀಕರಿಸುವ ಮತ್ತು ನಿರ್ವಹಿಸುವ ಗುತ್ತಿಗೆ ಗೆದ್ದಿದೆ. ಈ ಪೈಕಿ 2020 ರಲ್ಲಿ ಅಹಮದಾಬಾದ್, ಲಕ್ನೋ ಮತ್ತು ಮಂಗಳೂರಿನ ಕಾರ್ಯಾಚರಣೆಯನ್ನು ಇದು ವಹಿಸಿಕೊಂಡಿದೆ. ನವೀ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಹಕ್ಕುಗಳೊಂದಿಗೆ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಎಂಐಎಎಲ್) ನಲ್ಲಿ ಅಧಿಕ ಪಾಲುಗಾರಿಕೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಅದಾನಿ ವಿಮಾನ ನಿಲ್ದಾಣವು ಅದರ ಒಟ್ಟು ಸಾಮರ್ಥ್ಯವನ್ನು ಗಮನಿಸಿದರೆ ವರ್ಷಕ್ಕೆ 75 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ವಿಮಾನ ಪ್ರಯಾಣ ಸೇವೆ ನೀಡುತ್ತದೆ. ಹೆಚ್ಚಿನ ವಿವರಗಳಿಗಾಗಿ ಭೇಟಿ ನೀಡಿ. www.adani.com.