ನವದೆಹಲಿ, ಜ.18 (DaijiworldNews/HR): ಅತ್ಯಾಚಾರ ಪ್ರಕರರಣ ಸಂಬಂಧ ಸಚಿವ ಧನಂಜಯ್ ಮುಂಡೆ ವಿರುದ್ಧ ಮಾತನಾಡಿದ್ದ ಕಾರಣ ನ್ಯಾಷನಲಿಷ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಆರು ನಾಯಕರಿಂದ ತಮಗೆ ಬೆದರಿಕೆ ಕರೆಗಳು ಬಂದಿವೆ ಎಂದು ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಂಸದ ಕಿರೀಟ್ ಸೋಮಯ್ಯ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಿರೀಟ್ ಸೋಮಯ್ಯ, "ಧನಂಜಯ್ ಮುಂಡೆ ವಿರುದ್ಧ ಮಾತನಾಡಿದರೆ ಶೂಟ್ ಮಾಡುತ್ತೇವೆ ಎಂದುನ್ಯಾಷನಲಿಷ್ಟ್ ಕಾಂಗ್ರೆಸ್ ಪಕ್ಷದ ಆರು ನಾಯಕರು ಬೆದರಿಕೆಯೊಡ್ಡಿದ್ದು, ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ. ಧನಂಜಯ್ ಮುಂಡೆ ರಾಜೀನಾಮೆ ನೀಡಬೇಕು" ಎಂದು ಆಗ್ರಹಿಸಿದ್ದಾರೆ.
ಇನ್ನು ಕಳೆದವಾರ ಮಹಿಳೆಯೊಬ್ಬರು ಮಹಾರಾಷ್ಟ್ರದ ಸಾಮಾಜಿಕ ನ್ಯಾಯ ಸಚಿವರ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದರು ಮತ್ತು ಮುಂಬೈ ಪೊಲೀಸರು ತಮ್ಮ ದೂರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದಿದ್ದರು.
ಈ ಆರೋಪವನ್ನು ತಿರಸ್ಕರಿಸಿರುವ ಸಚಿವ ದೂರು ನೀಡಿರುವ ಮಹಿಳೆ ಹಾಗೂ ಆಕೆಯ ಸಹೋದರಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದು, ದೂರುದಾರ ಮಹಿಳೆಯ ಸಹೋದರಿ ಜೊತೆ ನನಗೆ ಸಂಬಂಧವಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.