ನವದೆಹಲಿ, ಜ. 18 (DaijiworldNews/MB) : ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಯವರಿಗೆ ಬಾಲಾಕೋಟ್ ವಾಯುದಾಳಿಯ ಬಗ್ಗೆ ಮೊದಲೇ ತಿಳಿದಿತ್ತು ಎಂದು ಸೂಚಿಸುವ ಬ್ರಾಡ್ಕಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್ನ ಮಾಜಿ ಸಿಇಒ ಪಾರ್ಥೊ ದಾಸಗುಪ್ತಾ ಜೊತೆಗಿನ ವಾಟ್ಸ್ಆಪ್ ಚಾಟ್ಗಳು ಸೋರಿಕೆಯಾಗಿರುವುದರಿಂದ, ''ರಾಷ್ಟ್ರೀಯ ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿದೆ'' ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ. ಹಾಗೆಯೇ ಈ ವಿಚಾರದ ಬಗ್ಗೆ ತನಿಖೆಯಾಗಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಸುರ್ಜೆವಾಲಾ ಅವರು, ''ಸೋರಿಕೆಯಾಗಿರುವ ಈ ಚಾಟ್ನಲ್ಲಿ ಹಣಕಾಸು ವಂಚನೆ, ಸಚಿವರ ಖಾತೆಗಳ ತೀರ್ಮಾನದ ಬಗ್ಗೆ ಚರ್ಚೆ ನಡೆದಿದೆ. ಇದು ರಾಷ್ಟ್ರೀಯ ಭದ್ರತೆಯೊಂದಿಗೆ ಆಟವಾಡಿದಂತೆ. ಅಧಿಕಾರದಲ್ಲಿ ಅಡಗಿರುವ ಪೊಳ್ಳುತನಕ್ಕೆ ಇದು ಸಾಕ್ಷಿ ಎಂದು ದೂರಿರುವ ಅವರು, ಸಂಪೂರ್ಣ ಆರೋಪ ಪಟ್ಟಿಯನ್ನು ಪರಿಶೀಲಿಸಿ ಒಂದೆರಡು ದಿನದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರು ವಿವರವಾದ ಹೇಳಿಕೆ ನೀಡಲಿದ್ದಾರೆ'' ಎಂದು ತಿಳಿಸಿದರು.
ಇನ್ನು ಕಾಂಗ್ರೆಸ್ನ ಹಿರಿಯ ಮುಖಂಡ ಪಿ.ಚಿದಂಬರಂ ಅವರು, ''ನಿಜವಾದ ದಾಳಿ ನಡೆದ ಮೂರು ದಿನಗಳಿಗೆ ಮೊದಲೇ ಒಬ್ಬ ಪತ್ರಕರ್ತನಿಗೆ ವಾಯುದಾಳಿಯ ಮಾಹಿತಿಯು ತಿಳಿದಿತ್ತೇ? ಹೌದೆಂದಾದರೆ ಅವರ ಮೂಲವು ಈ ಮಾಹಿತಿಯನ್ನು ಪಾಕಿಸ್ತಾನದ ಗೂಢಚರರು ಅಥವಾ ಮಾಹಿತಿದಾರರು ಸೇರಿದಂತೆ ಬೇರೆಯವರೊಂದಿಗೆ ಹಂಚಿಕೊಂಡಿಲ್ಲ ಎಂಬುದಕ್ಕೆ ಏನು ಖಾತರಿ ಇದೆ'' ಎಂದು ಪ್ರಶ್ನಿಸಿದ್ದಾರೆ.