ಬೆಂಗಳೂರು, ಜ. 18 (DaijiworldNews/MB) : ''ಮಹಾರಾಷ್ಟ್ರವು ಅನಗತ್ಯ ಗೊಂದಲ ಸೃಷ್ಟಿಸಲು ಯತ್ನ ಮಾಡುತ್ತಿದೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದು ಈಗಾಗಲೇ ಮಹಾಜನ್ ಆಯೋಗದ ವರದಿಯನ್ನು ಅಂಗೀಕರಿಸಲಾಗಿದೆ. ಮಹಾರಾಷ್ಟ್ರಕ್ಕೆ ಒಂದಿಂಚು ಭೂಮಿಯೂ ನೀಡಲ್ಲ'' ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆಗೆ ತಿರುಗೇಟು ನೀಡಿದರು.
"ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಅಧಿಕ ಸಂಖ್ಯೆಯಲ್ಲಿ ಮರಾಠಿ ಮಾತನಾಡುವ ಮತ್ತು ಸಂಸ್ಕೃತಿ ಹೊಂದಿರುವ ಪ್ರದೇಶಗಳನ್ನು ಮಹಾರಾಷ್ಟಕ್ಕೆ ಸೇರಿಸಲು ನಮ್ಮ ಸರ್ಕಾರ ಬದ್ಧವಾಗಿದ್ದು, ಗಡಿ ವಿಷಯಕ್ಕಾಗಿ ಹೋರಾಟ ನಡೆಸಿ ಹುತಾತ್ಮರಾದವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಇದಾಗಿದೆ" ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರವಿವಾರ ಹೇಳಿದ್ದರು.
ಈ ಹೇಳಿಕೆಗೆ ತಿರುಗೇಟು ನೀಡಿರುವ ಜಾರಕಿಹೊಳಿ, ''ಕರ್ನಾಟಕದ ಒಂದಿಂಚು ಭೂಮಿಯನ್ನು ಮಹಾರಾಷ್ಟ್ರಕ್ಕೆ ನೀಡುವ ಪ್ರಶ್ನೆಯೇ ಇಲ್ಲ. ಅಷ್ಟಕ್ಕೂ ಮಹಾರಾಷ್ಟ್ರ ಸರ್ಕಾರ ತನ್ನ ವೈಫಲ್ಯ ಮುಚ್ಚಿ ಹಾಕುವ ನಿಟ್ಟಿನಲ್ಲಿ ಈ ವಿಚಾರಗಳನ್ನು ಮುನ್ನಲೆಗೆ ತರುವ ಯತ್ನ ಮಾಡುತ್ತಿದೆ'' ಎಂದು ಆರೋಪಿಸಿದರು.
ಇನ್ನು ಬಿಜೆಪಿಯ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬೆಳಗಾವಿಯ ಕನ್ನಡ ನಾಯಕ ಅಶೋಕ್ ಚಂದರಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ (ಕೆಡಿಎ) ಅಧ್ಯಕ್ಷ ಟಿ ಎಸ್ ನಾಗಭರಣ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ ಎ ನಾರಾಯಣ ಗೌಡ, ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಮಹಾರಾಷ್ಟ್ರ ಮುಖ್ಯಮಂತ್ರಿಯ ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ರಾಜಕಾರಣಿಗಳು ಮುಗಿದ ಅಧ್ಯಾಯದಿಂದ ರಾಜಕೀಯ ಮೈಲೇಜ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಈರಣ್ಣ ಕಡಾಡಿ ಹೇಳಿದರೆ, ಈಗಾಗಲೇ ಗಡಿರೇಖೆ ಕುರಿತು ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದೆ. ಈ ನಡುವೆ ಈ ರೀತಿಯಾಗಿ ಹೇಳಿಕೆ ನೀಡುವುದು ನ್ಯಾಯಾಲಯದ ತಿರಸ್ಕಾರವಾಗಿದೆ ಎಂದು ಅಶೋಕ್ ಚಂದರಗಿ ಆರೋಪಿಸಿದ್ದಾರೆ. ಮಹಾರಾಷ್ಟ್ರದಲ್ಲಿರುವ ಸೋಲಾಪುರವನ್ನು ಮತ್ತೆ ಕರ್ನಾಟಕಕ್ಕೆ ನೀಡಬೇಕು ಎಂದು ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಹಾಗೂ ನಾರಾಯಣ ಗೌಡ ಆಗ್ರಹಿಸಿದ್ದಾರೆ.